
ಪ್ರಜಾವಾಣಿ ವಾರ್ತೆ
ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ) : ‘ಜಾಗತೀಕರಣ ಯುಗದಲ್ಲೂ ಆದಿವಾಸಿ ಸಂಸ್ಕೃತಿಗಳನ್ನು ಪಾಲಿಸಿಕೊಂಡು ಜೀವನ ಸಾಗಿಸುತ್ತಿರುವ ಮ್ಯಾಸಬೇಡ ಜನಾಂಗವು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಮುಖ್ಯವಾಹಿನಿಗೆ ಬರಲು ಮುಂದಾಗಬೇಕು’ ಎಂದು ಮ್ಯಾಸನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಸಂಚಾಲಕಿ ಹಿರೇಹಳ್ಳಿ ಅನ್ನಪೂರ್ಣಮ್ಮ ಹೇಳಿದರು.
ತಾಲ್ಲೂಕಿನ ಚಿನ್ನಹಗರಿ ನದಿ ದಂಡೆಯಲ್ಲಿ ಗುರುವಾರ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಮ್ಯಾಸಬೇಡನಾಯಕ ಚಿನ್ನಹಗರಿ ಉತ್ಸವದಲ್ಲಿ ಅವರು ಮಾತನಾಡಿದರು.
‘ಜನಾಂಗವು ಪುರಾತನವಾಗಿ ಪಾಲಿಸಿಕೊಂಡು ಬಂದಿರುವ ಆಚರಣೆಗಳನ್ನು ಕೈಬಿಡದೆ ಪಾಲಿಸಬೇಕು. ಶಿಕ್ಷಣ ಪಡೆದು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಿ ಇತರೆ ಜನಾಂಗಗಳಿಗೆ ಸಾಟಿಯಾಗಿ ಬದುಕು ನಡೆಸಬೇಕು. ಸಂಸ್ಕೃತಿಗಳ ಆಚರಣೆಯಿಂದ ಮಾತ್ರ ಜನಾಂಗ ಬಲಿಷ್ಠವಾಗಲು ಸಾಧ್ಯವಿಲ್ಲ ಎಂದು ಮನಗಾಣಬೇಕಿದೆ’ ಎಂದು ತಿಳಿಸಿದರು.
‘ಚಿನ್ನಹಗರಿ ನದಿಯು ಮ್ಯಾಸಬೇಡ ಜನಾಂಗದ ಜತೆ ಅವಿನಾವಭವ ನಂಟು ಹೊಂದಿದೆ. ನೂರಾರು ವರ್ಷಗಳಿಂದ ಈ ನದಿ ಪಾತ್ರದಲ್ಲಿ ಜನಾಂಗವು ಬದುಕು ಕಟ್ಟಿಕೊಂಡಿರುವ ಜತೆಗೆ ಸಾಂಸ್ಕೃತಿಕ ಆಚರಣೆಗಳನ್ನು ಮಾಡಿಕೊಂಡು ಬಂದಿದೆ. ಈ ಅಂಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಚಿನ್ನಹಗರಿ ಉತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಕನ್ನಡ ವಿಶ್ವವಿದ್ಯಾಲಯ ಕುಲಸಚಿವ ವಿರೂಪಾಕ್ಷಿ ಪೂಜಾರಹಳ್ಳಿ ಹೇಳಿದರು.
‘ಮ್ಯಾಸನಾಯಕ ಸಮುದಾಯದ ಗತ ಮತ್ತು ವರ್ತಮಾನ’ ಕುರಿತ ಸಂವಾದಲ್ಲಿ ‘ಮ್ಯಾಸನ್ಯಾಯಕರ ಕಟ್ಟೆಮನೆಗಳ’ ಬಗ್ಗೆ ಬೋಸೆದೇವರಹಟ್ಟಿ ಪಾಪಣ್ಣ, ‘ಕಿಲಾರಿ ಪರಂಪರೆ ಹಾಗೂ ಪಶುಪಾಲನೆ’ ಕುರಿತು ಸಂಶೋಧಕ ಸಿದ್ದೇಶ್ ಕಾತ್ರಿಕೇನಹಟ್ಟಿ, ‘ಮ್ಯಾಸ ಸಂಸ್ಸೃತಿ ಮೇಲೆ ದಾಸ ಸಂಸ್ಕೃತಿಯ ಪ್ರಭಾವ’ ವಿಷಯದ ಬಗ್ಗೆ ಶಾಮಣ್ಣ ಕೊಮ್ಮನಪಟ್ಟಿ ವಿಷಯ ಮಂಡಿಸಿದರು. 2ನೇ ವಿಚಾರಗೋಷ್ಠಿಯಲ್ಲಿ 11 ವಿಷಯ ತಜ್ಞರು ಮ್ಯಾಸನಾಯಕರ ಚರಿತ್ರೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ ಮಂಡಿಸಿದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು, ಜಗಳೂರು ತಾಲ್ಲೂಕಿನ ಕಾಮಗೇತನಹಳ್ಳಿಯ ಮ್ಯಾಸನಾಯಕ ಗುಡಿಕಟ್ಟೆಯ ಪೂಜಾರಿಗಳು, ಕಿಲಾರಿಗಳು, ಆಕನೂರಿನ ಪೋತರಾಜರಿಂದ ಬುಡಕಟ್ಟು ಸಂಪ್ರದಾಯದ ಹಲವು ಆಚರಣೆಗಳು ನಡೆದವು. ದಾಸಯ್ಯಗಳ ಶಂಖ, ಜಾಗಟೆ ಸದ್ದು, ದೇವರ ಎತ್ತುಗಳ ಪೂಜೆ, ಚಿನ್ನಹಗರಿಯಲ್ಲಿ ಗಂಗಾಪೂಜೆ ಸೇರಿ ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.