ADVERTISEMENT

ಅಂತಃಕರಣ ಪ್ರೀತಿ ತೋರಿಸಿದ ತ್ರಿವಿಧ ದಾಸೋಹಿ: ಉಪನ್ಯಾಸಕ ವಿಶ್ವನಾಥ್‌

ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:07 IST
Last Updated 14 ಆಗಸ್ಟ್ 2025, 6:07 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಬುಧವಾರ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ ಸ್ಮರಣೆ ಕಾರ್ಯಕ್ರಮದಲ್ಲಿ ಮುರುಘಾಮಠದ ಸಾಧಕ ಗುರು ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು
ಚಿತ್ರದುರ್ಗದ ಮುರುಘಾ ಮಠದಲ್ಲಿ ಬುಧವಾರ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ ಸ್ಮರಣೆ ಕಾರ್ಯಕ್ರಮದಲ್ಲಿ ಮುರುಘಾಮಠದ ಸಾಧಕ ಗುರು ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು   

ಚಿತ್ರದುರ್ಗ: ‘ಹಿಡಿದ ಕೆಲಸವನ್ನು ಬಿಡದೇ ಮಾಡುವ ಗುಣ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರದಾಗಿತ್ತು. ಈ ನಡೆಯಿಂದಲೇ ಅವರು ಸುತ್ತು-ಕಟ್ಟು ಎನ್ನುವ ಧ್ಯೇಯವಾಕ್ಯದೊಂದಿಗೆ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಸುತ್ತಿ ಮಠವನ್ನು ಕಟ್ಟಿದರು’ ಎಂದು ಎಸ್‌ಜೆಎಂ ಕಾನೂನು ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ.ಕೆ.ಎನ್‌. ವಿಶ್ವನಾಥ್‌ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ತ್ರಿವಿಧ ದಾಸೋಹಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶೂನ್ಯಪೀಠದ ಪ್ರಾರಂಭಿಕ ಹಂತದಲ್ಲಿನ 4 ಶತಮಾನಗಳ ಕಾಲ ಒಂದೆಡೆ ನಿಲ್ಲಲಿಲ್ಲ. ಎಡೆಯೂರು ಸಿದ್ದಲಿಂಗರ ಶ್ರಮದ ಫಲ ಮತ್ತು ಮುರುಘಾ ಪರಂಪರೆ ಪ್ರಾರಂಭದ ತರುವಾಯ ಅನೇಕ ಸ್ವಾಮೀಜಿಗಳು ತತ್ವ ಹಾಗೂ ಸಮಾಜ ಸುಧಾರಣೆಯ ಕಾರ್ಯ ಕೈಗೊಂಡರು’ ಎಂದರು.

ADVERTISEMENT

‘ಬ್ಯಾಡಗಿಯ ಮುಪ್ಪಿನಸ್ವಾಮೀಜಿ ನಂತರ ಪೀಠಾಧ್ಯಕ್ಷರಾದವರು ಜಯದೇವ ಮುರುಘರಾಜೇಂದ್ರ ಸ್ವಾಮೀಜಿ. ಆ ಕಾಲಘಟ್ಟದಲ್ಲಿ ಗುರು–ವಿರಕ್ತರ ನಡುವಿನ ತಾರತಮ್ಯ, ಜಾತಿಗಳ ನಡುವೆ ಅಸಮಾನತೆ, ಒಳಪಂಗಡಗಳಲ್ಲಿ ಗೊಂದಲ ಹೆಚ್ಚಾಗಿತ್ತು. ಇಂತಹ ಸಮಯದಲ್ಲಿ ಜಯದೇವರು ಹಂತ–ಹಂತವಾಗಿ ಈ ಎಲ್ಲ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಅವರ ನಡೆ ಸಮಾಜಕ್ಕೊಂದು ದಿಕ್ಕಾಗಿ ಗೋಚರಿಸಿತು’ ಎಂದು ತಿಳಿಸಿದರು.

‘ವರ್ಣ, ಬಡತನ, ಲಿಂಗ ತಾರತಮ್ಯದಂತಹ ಸಾಮಾಜಿಕ ಪಿಡುಗುಗಳನ್ನು ತಮ್ಮ ಸಂಚಾರದ ವೇಳೆ ಪರಿಹರಿಸುತ್ತಿದ್ದರು. ಬಡವರಿಗೆ ದೀನದಲಿತರಿಗೆ ಎಲ್ಲಿಲ್ಲದ ಅಂತಃಕರಣ ತೋರಿಸಿ, ಅವರೂ ಸಮಾಜದಲ್ಲಿ ಎಲ್ಲರಂತೆ ಬಾಳಬೇಕೆಂಬ ಹಂಬಲದಿಂದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು’ ಎಂದು ಸ್ಮರಿಸಿದರು.

‘ಸಮಾಜದ ಅಭ್ಯುದಯಕ್ಕೆ ಸಂಚಾರ ಕೈಗೊಂಡು ರಾಜ್ಯ ಹೊರರಾಜ್ಯಗಳಲ್ಲಿ ಪ್ರಸಾದ ನಿಲಯ ಸ್ಥಾಪಿಸಿದವರು ಜಯದೇವ ಸ್ವಾಮೀಜಿ. ಇವರಿಗೆ ಮೈಸೂರಿನ ಅರಸರು ಅಂಬಾರಿ ಉತ್ಸವ ಮಾಡಿದ್ದರು. ಇದು ಶ್ರೀಗಳ ವ್ಯಕ್ತಿತ್ವವನ್ನು ತೋರಿಸುತ್ತದೆ’ ಎಂದು ಮುರುಘಾಮಠದ ಸಾಧಕ ಗುರು ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.

‘ಸಮಾಜದಿಂದ ಬಂದ ಸಂಪತ್ತನ್ನು ಮತ್ತೆ ಅದೇ ಸಮಾಜಕ್ಕೆ ಅನೇಕ ಸೇವೆಗಳ ಮೂಲಕ ವಿನಿಯೋಗಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಿಗೆ ಶ್ರೀಗಳು ಉದಾರವಾದ ದೇಣಿಗೆ ನೀಡಿದ್ದಾರೆ. ಅದು ಲಕ್ಷ–ಲಕ್ಷ ರೂಪದಲ್ಲಿದೆ ಎಂದರೆ ತಪ್ಪಿಲ್ಲ’ ಎಂದು ಹೇಳಿದರು.

ಹೇಮರೆಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪಾಲಾಕ್ಷಪ್ಪ, ಕಾರ್ಯದರ್ಶಿ ಡಿ.ಟಿ. ಶಿವಾನಂದಪ್ಪ, ಜಾಗತಿಕ ಲಿಂಗಾಯತ ಸಭಾದ ಬಸವರಾಜ ಕಟ್ಟಿ ಇದ್ದರು.

ಜಯದೇವ ಶ್ರೀ ಶಿಸ್ತುಬದ್ಧ ಜೀವನದೊಂದಿಗೆ ಮಠವನ್ನು ಶ್ರೀಮಂತಗೊಳಿಸಿದರು. 53 ವರ್ಷ ದೀಪದಂತೆ ಬೆಳಗಿ ತಾನು ನೋವು ಅನುಭವಿಸಿ ಜಗಕೆ ಬೆಳಕು ನೀಡಿದರು.
-ಪ್ರೊ.ಕೆ.ಎನ್‌. ವಿಶ್ವನಾಥ್‌, ಹಿರಿಯ ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.