ADVERTISEMENT

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭ್ರಮದ ತುಳಸಿ ಹಬ್ಬ

ಮಹಿಳೆಯರಿಂದ ತುಳಸಿ ಮಾತೆಗೆ ಶ್ರದ್ಧಾ–ಭಕ್ತಿಯಿಂದ ವಿವಿಧೆಡೆ ಪೂಜೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 4:27 IST
Last Updated 17 ನವೆಂಬರ್ 2021, 4:27 IST
ಚಿತ್ರದುರ್ಗ ನಗರದ ಮನೆಯೊಂದರ ಮುಂಭಾಗ ಮಂಗಳವಾರ ತುಳಸಿ ಕಟ್ಟೆಯನ್ನು ಪುಷ್ಟ, ದೀಪಗಳಿಂದ ಅಲಂಕರಿಸಿ ಶ್ರದ್ಧಾ–ಭಕ್ತಿಯಿಂದ ತುಳಸಿ ಪೂಜೆ ಆಚರಿಸಿರುವುದು
ಚಿತ್ರದುರ್ಗ ನಗರದ ಮನೆಯೊಂದರ ಮುಂಭಾಗ ಮಂಗಳವಾರ ತುಳಸಿ ಕಟ್ಟೆಯನ್ನು ಪುಷ್ಟ, ದೀಪಗಳಿಂದ ಅಲಂಕರಿಸಿ ಶ್ರದ್ಧಾ–ಭಕ್ತಿಯಿಂದ ತುಳಸಿ ಪೂಜೆ ಆಚರಿಸಿರುವುದು   

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಮಂಗಳವಾರ ಮಹಿಳೆಯರು ಶ್ರದ್ಧಾ–ಭಕ್ತಿಯಿಂದ ತುಳಸಿ ಮಾತೆಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸಿದರು. ಕಿರು ದೀಪಾವಳಿ ಎಂಬ ಹೆಸರಿನಿಂದಲೂ ಈ ಹಬ್ಬ ಈಗಲೂ ಪ್ರಚಲಿತದಲ್ಲಿದೆ.

ತುಳಸಿ ಹಬ್ಬದ ಅಂಗವಾಗಿ ಅನೇಕ ಮಹಿಳೆಯರು ಮನೆಗಳ ಮುಂಭಾಗದ ತುಳಸಿಕಟ್ಟೆಯನ್ನು ಶುಚಿಗೊಳಿಸಿ, ವೈವಿಧ್ಯಮಯ ರಂಗೋಲಿ ಹಾಕಿದರು. ತುಳಸಿ ಗಿಡದ ಜತೆ ನೆಲ್ಲಿಕಾಯಿ ಗಿಡವನ್ನು ಇಟ್ಟು, ಶುಭ್ರ ಸೀರೆ–ರವಿಕೆ ಹೊದಿಸುವುದರ ಜತೆಗೆ ಪುಷ್ಪಗಳಿಂದ ಅಲಂಕರಿಸಿದ್ದರು. ಸುತ್ತಲೂ ದೀಪಗಳನ್ನು ಇಡಲಾಗಿತ್ತು. ನಂತರ ಮಹಾಮಂಗಳಾರತಿ ಬೆಳಗುವ ಮೂಲಕ ಭಕ್ತಿಯಲ್ಲಿ ಮಿಂದೆದ್ದರು.

ಸಿಹಿ ತಿನಿಸು, ಅವಲಕ್ಕಿ ಸೇರಿ ವೈವಿಧ್ಯಮಯ ಖಾದ್ಯಗಳನ್ನು ಎಡೆಯಾಗಿ ಸಮರ್ಪಿಸಲಾಯಿತು. ವಿವಿಧ ಬಗೆಯ ಹಣ್ಣುಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಅಕ್ಕ–ಪಕ್ಕದ ಮನೆಗಳ ಮಹಿಳೆಯರನ್ನು ಪೂಜೆಗೆ ಕರೆದು ಉಡಿ ತುಂಬಿ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ತುಳಸಿ ಮಾತೆಯ ಪೂಜೆಯೊಂದಿಗೆ ಮಹಾವಿಷ್ಣು, ಮಹಾಲಕ್ಷ್ಮಿ ದೇವಿಯ ಆರಾಧನೆ ಕೂಡ ನಡೆಯಿತು. ಹಲವು ದೇಗುಲಗಳಲ್ಲಿ ತುಳಸಿ ಕಲ್ಯಾಣೋತ್ಸವ ಪೂಜೆ ನೆರವೇರಿತು. ನಲ್ಲಿಕಾಯಿ ಗಿಡಕ್ಕೆ ನಗರದ ಮಾರುಕಟ್ಟೆ
ಗಳಲ್ಲಿ ಹೆಚ್ಚು ಬೇಡಿಕೆ ಕಂಡುಬಂದಿತು. ಹೂಗಳ ಖರೀದಿ ಭರಾಟೆಯೂ ಜೋರಾಗಿತ್ತು.

ಸೋಮವಾರ ಕೂಡ ನಗರದ ಹಲವೆಡೆ ಹಬ್ಬ ಆಚರಿಸಲಾಯಿತು. ಇಲ್ಲಿಯ ಏಕನಾಥೇಶ್ವರಿ, ಬರಗೇರಮ್ಮ, ಉಚ್ಚಂಗಿ ಯಲ್ಲಮ್ಮ ದೇಗುಲಗಳಲ್ಲೂ ಕೂಡ ದೇವತೆಗಳ ಮೂರ್ತಿಗೆ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅರ್ಚಕರುಅಲಂಕರಿಸಿದ್ದರು. ಮನೆಗಳಲ್ಲಿ ಪೂಜೆಯಾದ ಬಳಿಕ ಕೆಲವರು ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ನಗರ, ಪಟ್ಟಣ ಅಷ್ಟೇ ಅಲ್ಲದೆ, ಗ್ರಾಮೀಣ ಭಾಗಗಳಲ್ಲೂ ಸಂಭ್ರಮ ಮನೆಮಾಡಿತ್ತು. ಈ ಹಬ್ಬದಲ್ಲೂ ಪ್ರತಿ ವರ್ಷ ಪಟಾಕಿಗಳ ಸದ್ದು ಮೊಳಗುತ್ತಿತ್ತು. ಆದರೆ, ಸಂಜೆ ಸುರಿದ ಮಳೆಯಿಂದಾಗಿ ಪಟಾಕಿಗಳ ಶಬ್ದ ಹೆಚ್ಚಾಗಿ ಕೇಳಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.