ADVERTISEMENT

ಮನೆ ಬಿಟ್ಟು ಹೋಗಲು ಜನರಿಗೆ ಭಯ

ಸಾಸ್ವೆಹಳ್ಳಿ, ಬೆನಕನಹಳ್ಳಿ ಗ್ರಾಮಕ್ಕೆ ನುಗ್ಗುವ ನದಿ ನೀರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 4:37 IST
Last Updated 24 ಜುಲೈ 2022, 4:37 IST
ಕಳೆದ ವರ್ಷ ಪ್ರವಾಹದ ವೇಳೆ ಬೆನಕನಹಳ್ಳಿ ಗ್ರಾಮದೊಳಗೆ ನೀರು ನುಗ್ಗಿದ ಸಂದರ್ಭ.
ಕಳೆದ ವರ್ಷ ಪ್ರವಾಹದ ವೇಳೆ ಬೆನಕನಹಳ್ಳಿ ಗ್ರಾಮದೊಳಗೆ ನೀರು ನುಗ್ಗಿದ ಸಂದರ್ಭ.   

ಸಾಸ್ವೆಹಳ್ಳಿ: ಹೋಬಳಿಯು ಹಲವು ಗ್ರಾಮಗಳು ತುಂಗಭದ್ರಾ ನದಿಯ ದಂಡೆಯ ಮೇಲಿದ್ದು, ಮಳೆಗಾಲದಲ್ಲಿ ತುಂಗಭದ್ರೆ ಉಕ್ಕಿ ಹರಿದಾಗ ನದಿ ಪಾತ್ರದ ಜನ ನೆಮ್ಮದಿ ಕಳೆದುಕೊಳ್ಳುವಂತಾಗುತ್ತಿದೆ.

ಬಾಗೇವಾಡಿ, ಹನಗವಾಡಿ, ಹೊಸಹಳ್ಳಿ, ಸಾಸ್ವೆಹಳ್ಳಿ, ರಾಂಪುರ, ಬುಳ್ಳಾಪುರ, ಹಿರೇಬಾಸೂರು, ಬೆನಕನಹಳ್ಳಿ ಗ್ರಾಮಗಳು ಪ್ರವಾಹ ಬಾಧಿತಗೊಳ್ಳುತ್ತಿದ್ದು, ಈ ವೇಳೆ ಜನಜೀವನ ಅಸ್ತವ್ಯಸ್ತವಾಗುತ್ತಿದೆ.

ಮಳೆಗಾಲದಲ್ಲಿ ತುಂಗಾ ಹಾಗೂ ಭದ್ರಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಿದಾಗ ಸಾಸ್ವೆಹಳ್ಳಿ, ಬೆನಕನಹಳ್ಳಿಯ ಕೆಲವು ಮನೆಗಳಿಗೆ ನೀರು ನುಗ್ಗುತ್ತದೆ. ಬೆನಕನಹಳ್ಳಿಯ ಹನುಮಹಳ್ಳ ತುಂಬಿ ಹರಿಯುವುದರಿಂದ ಕಮ್ಮಾರಗಟ್ಟೆ–ಬೆನಕನಹಳ್ಳಿಯ ರಸ್ತೆಯ ಮೇಲೆ ನೀರು ಹರಿದು ಸಂಚಾರ ವ್ಯತ್ಯಯಗೊಳ್ಳುತ್ತದೆ. ಜೊತೆಗೆ ಸಾವಿರಾರು ಎಕರೆ ಕೃಷಿ ಭೂಮಿಯಲ್ಲೂ ನೀರು ನಿಲ್ಲುತ್ತದೆ.

ADVERTISEMENT

ಪ್ರವಾಹ ಬಂದಾಗ ಮಾವಿನಕೋಟೆಯ ಬಳಿ ರಸ್ತೆಯ ಮೇಲೆ ಹಾಗೂ ಬೊಮ್ಮನಹಳ್ಳಿಹಳ್ಳದ ಹಿನ್ನೀರಿಗೆ ಕುಳಗಟ್ಟೆ ಕ್ರಾಸ್ಬಳಿ ಸೇತುವೆ ಮೇಲೆ ನೀರು ಹರಿಯುತ್ತದೆ. ನೂರಾರು ಎಕರೆ ಭೂಪ್ರದೇಶದಲ್ಲಿ ವಾರ, ತಿಂಗಳುಗಟ್ಟಲೆ ಹಿನ್ನೀರು ನಿಂತ ನಿದರ್ಶನಗಳಿವೆ. ಗದ್ದೆಯಲ್ಲಿ ಚೆಲ್ಲಿದ ಭತ್ತದ ಬೀಜ ಕೊಚ್ಚಿ ಹೋಗುತ್ತದೆ. ಇಲ್ಲಿ ಮೇಲ್ಮಟ್ಟದ ಸೇತುವೆ ನಿರ್ಮಿಸಿದರೆ ಪ್ರವಾಹ ಸಂದರ್ಭದಲ್ಲಿ ಓಡಾಟಕ್ಕೆ ಆಗುತ್ತಿರುವ ತೊಂದರೆ ತಪ್ಪಲಿದೆ ಎನ್ನುತ್ತಾರೆ ಈ ಭಾಗದ ಜನರು.

‘ಸಣ್ಣ ಮಕ್ಕಳನ್ನು ಇಟ್ಟುಕೊಂಡು ಇಲ್ಲಿ ಬದುಕುವುದು ಕಷ್ಟವಾಗುತ್ತಿದೆ. ಹೊಳೆ (ನದಿ ಪ್ರವಾಹ) ಬರುತ್ತದೆ ಎಂದು ಸಾರಿದರೆ ಆ ವಾರವಿಡಿ ನಿದ್ರೆಯಿಲ್ಲದೆ ಕಾಯುವುದೇ ನಮಗೆ ಕಾಯಕವಾಗುತ್ತದೆ. ಎತ್ತರದ ಪ್ರದೇಶದಲ್ಲಿ ಜಾಗ ಕೊಟ್ಟರೆ ನಾವೂ ನೆಮ್ಮದಿಯಿಂದ ಜೀವನ ಸಾಗಿಸಬಹುದು’ ಎಂದು ಬೆನಕನಹಳ್ಳಿಯ ವೀಣಾ ಗಣೇಶ್ ಅವರು ‘ಪ್ರಜಾವಾಣಿ’ ಎದುರು ಸಂಕಟ ತೋಡಿಕೊಂಡರು.

‘ನಾವು ತರಕಾರಿ ಮಾರಿ ಜೀವನ ಮಾಡುತ್ತೇವೆ. ಹೊಳೆ ಬಂದಾಗ ಅಧಿಕಾರಿಗಳು, ಜನನಾಯಕರು ಇಲ್ಲಿಗೆ ಬಂದು ಪರಿಹಾರ ನೀಡುತ್ತೇವೆ ಎಂದು ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಪ್ರವಾಹ ಇಳಿದ ಮೇಲೆ ಇತ್ತ ತಲೆ ಕೂಡ ಹಾಕುವುದಿಲ್ಲ’ ಎಂದು ಸಾಸ್ವೆಹಳ್ಳಿಯ ಗೌರಮ್ಮ ಅಸಮಾಧಾನ ವ್ಯಕ್ತಪಡಿಸಿದರು.

‘ಶಾಸಕರು ಇಲ್ಲಿಗೆ ಬಂದಾಗ ತಡೆಗೋಡೆ ನಿರ್ಮಿಸುವ ಬಗ್ಗೆ ಭರವಸೆ ನೀಡುತ್ತಾರೆ. ನಮಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ಎದುರಾಗುತ್ತಿದೆ. ನೀರು ನುಗ್ಗಿ ಮನೆಗಳು ಶಿಥಿಲಗೊಳ್ಳುತ್ತವೆ. ಅಂತಹ ಮನೆಯಲ್ಲೇ ಜೀವ ಭಯದಿಂದ ವಾಸ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

‘ತುಂಗಭದ್ರಾ ನದಿಯ ನೀರು 12 ಮೀಟರ್‌ಗಿಂತ ಜಾಸ್ತಿ ಬಂದಾಗ ಸಾಸ್ವೆಹಳ್ಳಿಯ ದಾಸರ ಕೇರಿ, ಹಳೆ ಐನೂರು ಬಡಾವಣೆಯ ನಾಲ್ಕೈದು ಮನೆಗಳು ಹಾಗೂ ಬೆನಕನಹಳ್ಳಿಯ ನಾಲ್ಕೈದು ಮನೆಗಳಿಗೆ ನೀರು ನುಗ್ಗುತ್ತದೆ. ಮುಂಜಾಗೃತಾ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ, ಜಾಗೃತಿ ಮೂಡಿಸಿ, ಆ ಕುಟುಂಬಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ’ ಎಂದು ಉಪತಹಶೀಲ್ದಾರ್ ಎಸ್.ಪರಮೇಶ್ ನಾಯ್ಕ್ ಪ್ರತಿಕ್ರಿಯಿಸಿದರು.

*

ತುಂಗಭದ್ರಾ ಹೊಳೆಗೆ ತಡೆಗೋಡೆ ನಿರ್ಮಿಸಬೇಕು. ಇಲ್ಲವೇ ನಮಗೆ ಬೇರೆ ಕಡೆ ಮನೆ ನಿರ್ಮಿಸಿಕೊಳ್ಳಲು ಸ್ಥಳ ನೀಡಬೇಕು.
-ಗೌರಮ್ಮ, ಸಾಸ್ವೆಹಳ್ಳಿ ಗ್ರಾಮಸ್ಥರು

*

ಮಳೆಗಾಲ ಬಂತೆಂದರೆ ತುಂಬಾ ಭಯವಾಗುತ್ತದೆ. ಯಾವಾಗ ತುಂಗಭದ್ರಾ ನದಿ ನೀರು ಮನೆಯೊಳಗೆ ನುಗ್ಗುತ್ತದೆಯೋ ತಿಳಿಯುವುದಿಲ್ಲ.
-ವೀಣಾ ಗಣೇಶ್, ಬೆನಕನಹಳ್ಳಿ ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.