ADVERTISEMENT

ಹಿರಿಯೂರು: ವಿವಿ ಸಾಗರ ಕಣ್ತುಂಬಿಕೊಳ್ಳಲು ಜನಜಾತ್ರೆ

ಕೋಡಿಯ ಹತ್ತಿರಕ್ಕೆ ವಾಹನಗಳು ಹೋಗದಂತೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 8:26 IST
Last Updated 24 ಅಕ್ಟೋಬರ್ 2025, 8:26 IST
ಬಲಿಪಾಢ್ಯಮಿ ದಿನವಾದ ಬುಧವಾರ ವಾಣಿವಿಲಾಸ ಜಲಾಶಯದ ನೀರು ಕೋಡಿಯಲ್ಲಿ ಹರಿಯುವುದನ್ನು ವೀಕ್ಷಿಸಿದ ಪ್ರವಾಸಿಗರು
ಬಲಿಪಾಢ್ಯಮಿ ದಿನವಾದ ಬುಧವಾರ ವಾಣಿವಿಲಾಸ ಜಲಾಶಯದ ನೀರು ಕೋಡಿಯಲ್ಲಿ ಹರಿಯುವುದನ್ನು ವೀಕ್ಷಿಸಿದ ಪ್ರವಾಸಿಗರು   

ಹಿರಿಯೂರು: 115 ವರ್ಷಗಳ ಇತಿಹಾಸ ಇರುವ ತಾಲ್ಲೂಕಿನ ವಾಣಿವಿಲಾಸ ಜಲಾಶಯ ನಾಲ್ಕನೇ ಬಾರಿಗೆ ಕೋಡಿ ಬಿದ್ದಿದ್ದು, ಕೋಡಿಯಲ್ಲಿ ನೀರು ನರ್ತಿಸುತ್ತ ಸಾಗುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರು ಜಾತ್ರೆಯ ರೀತಿ ಬರುತ್ತಿದ್ದಾರೆ.

ಕೋಡಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ತಡೆಯಲು ವಿಶ್ವೇಶ್ವರಯ್ಯ ನೀರಾವರಿ ನಿಗಮ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಕೋಡಿಯಿಂದ 25ರಿಂದ 30 ಮೀಟರ್ ದೂರದಲ್ಲಿ ವಾಹನಗಳು ಮುಂದೆ ಹೋಗದಂತೆ ಹಿರಿಯೂರು ಮತ್ತು ಹೊಸದುರ್ಗ ಎರಡೂ ಕಡೆ ದೊಡ್ಡ ಕಂದಕ ತೋಡಿದ್ದಾರೆ. ಹೀಗಾಗಿ ಹಿರಿಯೂರು– ಹೊಸದುರ್ಗ ಪಟ್ಟಣಗಳ ನಡುವೆ ನಿತ್ಯ ಸಂಚರಿಸುವ ಬಸ್‌ಗಳು ವಾಣಿವಿಲಾಸ ಪುರಕ್ಕೆ ಬಂದು ಮರಳಿ ಕಕ್ಕಯ್ಯನಹಟ್ಟಿ ಮಾರ್ಗವಾಗಿ ಭರಮಗಿರಿ ಬೈಪಾಸ್ ಮೂಲಕ ಸಾಗುತ್ತಿವೆ.

ಸೌಲಭ್ಯಗಳು ಮರೀಚಿಕೆ: 

ADVERTISEMENT

ಭರ್ತಿಯಾಗಿರುವ ಅಣೆಕಟ್ಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೋಡಿ ಭಾಗದಲ್ಲಿ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿದೆ. ಸೀಮಿತ ವಸತಿ ಹಾಗೂ ಊಟ–ಉಪಾಹಾರಕ್ಕೆ ದೊಡ್ಡ ಹೋಟೆಲ್‌ಗಳು ಇಲ್ಲದಿರುವುದು ದೊಡ್ಡ ಕೊರತೆ. ಹೆಸರಿಗೆ ಎಂಬಂತೆ ಕಣಿವೆ ಮಾರಮ್ಮ ದೇಗುಲದ ಆವರಣದಲ್ಲಿ, ಅಣೆಕಟ್ಟೆಯ ಎಡಭಾಗದ ಗುಡ್ಡದ ಪ್ರವಾಸಿ ಮಂದಿರದ ಕೆಳಗೆ ಶೌಚಾಲಯಗಳಿದ್ದು, ಶುಚಿತ್ವದ ಕೊರತೆ ಎದ್ದು ಕಾಣುತ್ತದೆ.

ಕೋಡಿಯ ನೀರು ಹರಿಯುವ ಸ್ಥಳದಲ್ಲಿ ಸೇತುವೆ ನಿರ್ಮಾಣ, ಪ್ರವಾಸೋದ್ಯಮ ಇಲಾಖೆಯಿಂದ ಊಟ–ವಸತಿ ವ್ಯವಸ್ಥೆ, ಉದ್ಯಾನಗಳ ನವೀಕರಣ, ವಾಹನ ನಿಲುಗಡೆಗೆ ಸ್ಥಳ ಗುರುತಿಸುವಿಕೆಯನ್ನು ತಕ್ಷಣಕ್ಕೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಕೋಡಿಯ ಸಮೀಪಕ್ಕೆ ವಾಹನಗಳು ಹೋಗದಂತೆ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಕಂದಕ ನಿರ್ಮಿಸಿರುವುದು 
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಅಣೆಕಟ್ಟೆಯ ಕೋಡಿಯಲ್ಲಿ ಗುರುವಾರ ನೀರು ರಭಸವಾಗಿ ಹರಿಯುತ್ತಿರುವ ದೃಶ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.