ADVERTISEMENT

ಲಾಕ್‌ಡೌನ್‌ನಲ್ಲಿ ಊರಿಗೆ ಮರಳಿ ಸಮಾಧಿಯಾದರು

ಮಣ್ಣಿನ ದಿಬ್ಬ ಕುಸಿದು ಇಬ್ಬರು ಸಾವು, ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:28 IST
Last Updated 15 ಅಕ್ಟೋಬರ್ 2020, 5:28 IST
ನಂದೀಶನಾಯ್ಕ
ನಂದೀಶನಾಯ್ಕ   

ನಾಯಕನಹಟ್ಟಿ: ಲಾಕ್‌ಡೌನ್‌ನಲ್ಲಿ ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆಗಾಗಿ ಮಣ್ಣುತುಂಬುವ ಕೆಲಸಕ್ಕೆ ದೊಡ್ಡಹಳ್ಳಕ್ಕೆ ತೆರಳಿದ ನಂದೀಶ ನಾಯ್ಕ್‌ ಮಣ್ಣು ದಿಬ್ಬ ಕುಸಿದು ಮೃತಪಟ್ಟಿದ್ದಾರೆ. ಹರೀಶ್‌ ಜತೆಗೆ ಕಣ್ಣೆದುರೇ ಮಣ್ಣಾಗಿದ್ದನ್ನು ಕಂಡ ಸ್ನೇಹಿತರು ಆಘಾತಕ್ಕೆ ಒಳಗಾಗಿದ್ದಾರೆ.

ನಾಯಕನಹಟ್ಟಿ ಸಮೀಪದ ಮನುಮೈನಹಟ್ಟಿ ಗ್ರಾಮದಲ್ಲಿ ಸಂಭವಿಸಿದ ಘಟನೆ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಐವರು ಸ್ನೇಹಿತರಲ್ಲಿ ಮೂವರು ಅಪಾಯದಿಂದ ಪಾರಾಗಿದ್ದಾರೆ.

ನಂದೀಶ್‌ ನಾಯ್ಕ್‌ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಹತ್ತು ವರ್ಷಗಳಿಂದ ಉದ್ಯೋಗಿಯಾಗಿದ್ದರು. ಪತ್ನಿ ರೋಹಿಣಿ ಬಾಯಿ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಮಕ್ಕಳನ್ನು ಅಲ್ಲಿಯೇ ಶಾಲೆ ಸೇರಿಸಿ ದಂಪತಿ ಸುಂದರ ಬದುಕು ಕಟ್ಟಿಕೊಂಡಿದ್ದರು. ಆದರೆ, ಲಾಕ್‌ಡೌನ್ ಪರಿಣಾಮದಿಂದ ಇಬ್ಬರೂ ಕೆಲಸ ಕಳೆದುಕೊಂಡು ಸ್ವಗ್ರಾಮ ಮನುಮೈನಹಟ್ಟಿಗೆ ಮರಳಿದ್ದರು.

ADVERTISEMENT

ಐದು ಎಕರೆ ಹೊಲದಲ್ಲಿ ಶೇಂಗಾ ಬಿತ್ತನೆ ಮಾಡಿ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಜೀವನ ನಿರ್ವಹಣೆಗೆ ನಂದೀಶ್‌ ನಾಯ್ಕ್ ಗ್ರಾಮದಲ್ಲಿ ಸಿಗುತ್ತಿದ್ದ ಕೂಲಿ ಕೆಲಸಗಳನ್ನು ಮಾಡುತ್ತಿದ್ದರು. ಹೀಗೆ ಕೂಲಿ ಕೆಲಸಕ್ಕೆ ಹೋಗಿದ್ದವರು ಮನೆಗೆ ಮರಳಲೇ ಇಲ್ಲ.

‘ಲಾಕ್‌ಡೌನ್ ಸಡಿಲವಾಗಿದ್ದರಿಂದ ಬೆಂಗಳೂರಿಗೆ ತೆರಳಿ ಮೊದಲಿದ್ದ ಕಂಪನಿಗಳಲ್ಲೇ ಕೆಲಸ ಮಾಡಲು ತೀರ್ಮಾನಿಸಿದ್ದೆವು. ಆದರೆ, ಶೇಂಗಾ ಕಟಾವಿನ ಕೆಲಸವಿದ್ದ ಕಾರಣ ಒಂದು ತಿಂಗಳ ಮಟ್ಟಿಗೆ ಬೆಂಗಳೂರಿಗೆ ತೆರಳುವುದನ್ನು ಮುಂದೂಡಿದ್ದೆವು. ಬುಧವಾರ ಬೆಳಿಗ್ಗೆ ಮಣ್ಣು ತುಂಬಲು ಹೋದ ಗಂಡ ಮಣ್ಣು ಸೇರಿದ. ನನಗೆ ಹಾಗೂ ನನ್ನ ಮಕ್ಕಳಿಗೆ ಇನ್ನು ಯಾರು ದಿಕ್ಕು’ ಎಂದು ಎದೆಬಡಿದುಕೊಂಡು ನಂದೀಶ ಅವರ ಪತ್ನಿ ರೋಹಿಣಿಬಾಯಿ ಕಣ್ಣೀರು ಹಾಕಿದರು.

ಕುಟುಂಬದಲ್ಲಿ ದುಡಿಯುವ ಏಕೈಕ ಮಗ ಹರೀಶ. ತಂದೆ–ತಾಯಿಗೆ ವಯಸ್ಸಾಗಿದ್ದು, ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದರು. ಅಕ್ಕ ಮತ್ತು ಸಹೋದರನೊಂದಿಗೆ ಸುಖಿಯಾಗಿದ್ದರು. ಉತ್ತಮ ಜೀವನದ ಕನಸನ್ನು ಕಟ್ಟಿಕೊಂಡು ಶ್ರಮವಹಿಸಿ ದುಡಿಮೆಯಲ್ಲಿ ತೊಡಗಿದ್ದರು.

ಮೂರ‍್ನಾಲ್ಕು ದಿನಗಳಿಂದ ಗ್ರಾಮದಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಯ ಸುತ್ತ ಮಳೆ ನೀರು ನಿಲ್ಲುತ್ತಿತ್ತು. ಇದಕ್ಕೆ ಮಣ್ಣು ಹಾಕಿ ಸರಿ ಮಾಡಲು ಯುವಕರು ಆಲೋಚಿಸಿದ್ದರು. ಮಣ್ಣು ತುಂಬುವ ಕೆಲಸವನ್ನು ಒಪ್ಪಿಕೊಂಡು ಐದು ಜನ ಯುವಕರು ಸಮೀಪದ ದೊಡ್ಡಹಳ್ಳಕ್ಕೆ ಎತ್ತಿನಗಾಡಿಯೊಂದಿಗೆ ತೆರಳಿದ್ದರು. ಮೇಲ್ಭಾಗದಲ್ಲಿ ಮಳೆಯಿಂದ ಹಸಿಯಾದ ಮಣ್ಣಿದ್ದರಿಂದ ಆಳವಾದ ಗುಂಡಿಯಿಂದ ಒಣ ಮಣ್ಣು ತೆಗೆದು ಎತ್ತಿನ ಗಾಡಿಗೆ ತುಂಬಲು ಮುಂದಾದರು. ನಂದೀಶ ನಾಯ್ಕ್‌ ಮತ್ತು ಹರೀಶ ಮಣ್ಣಿನ ಗುಂಡಿಯಲ್ಲಿ ಇಳಿದು ಮಣ್ಣು ತುಂಬುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಇನ್ನು ಉಳಿದ ಮೂರು ಜನ ಯುವಕರು ಮಣ್ಣನ್ನು ಮೇಲಕ್ಕೆ ತಂದು ಎತ್ತಿನಗಾಡಿಗೆ ಹಾಕುತ್ತಿದ್ದರು. ಹಸಿಯಾದ ಹಾಗೂ ಭಾರಿ ಗಾತ್ರದ ಮಣ್ಣಿನ ಉಂಡೆಗಳು ಇಬ್ಬರ ಮೇಲೆ ಏಕಾಏಕಿ ಕುಸಿದುಬಿದ್ದಿವೆ. ಸ್ಥಳದಲ್ಲಿದ್ದ ಮತ್ತಿಬ್ಬರು ಇವರನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ. ಆದರೆ, ಇಬ್ಬರ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದ ಕಾರಣ ಉಸಿರುಗಟ್ಟಿ ಸ್ಥಳದಲ್ಲಿಯೇ ಒಬ್ಬ ಯುವಕ ಮೃತಪಟ್ಟಿದ್ದಾರೆ. ನಾಯಕನಹಟ್ಟಿ ಸಮುದಾಯ ಆರೋಗ್ಯ ಕರೆತರುವಾಗ ಮತ್ತೊಬ್ಬರು ಪ್ರಾಣ ಬಿಟ್ಟಿದ್ದಾರೆ.

ಅಕ್ಕನ ವಿವಾಹ ಸಿದ್ಧತೆಯಲ್ಲಿದ್ದಾಗ ದುರಂತ

ಕುಟುಂಬಕ್ಕೆ ಆಧಾರವಾಗಿದ್ದ ಹರೀಶ್‌, ತನ್ನ ಅಕ್ಕನ ಮದುವೆ ನಿಶ್ಚಯಿಸಿ ಮದುವೆಯ ಜವಾಬ್ದಾರಿ ಹೊತ್ತಿದ್ದರು. ಬುಧವಾರ ಮದುವೆಯ ಬಗ್ಗೆ ದಿನಾಂಕ ನಿಗದಿಮಾಡಲು ಶಾಸ್ತ್ರ ಕೇಳಬೇಕಾಗಿತ್ತು. ಹೀಗಾಗಿ, ತಂದೆ ತಿಮ್ಮಣ್ಣನ ಬದಲು ಪುತ್ರ ಹರೀಶ್‌ ಎತ್ತಿನಗಾಡಿ ಹೊಡೆದುಕೊಂಡು ಹೋಗಿದ್ದ.

‘ಕೆಲಸ ಮುಗಿಸಿಕೊಂಡು ಶಾಸ್ತ್ರ ಕೇಳಲು ಹೋಗೋಣ ಎಂದು ಮಗ ಹೇಳಿದ್ದ. ಬೆಳಿಗ್ಗೆ ಮಣ್ಣುತುಂಬಲು ಹಳ್ಳಕ್ಕೆ ಹೋಗಿ ಮಣ್ಣಿನಲ್ಲಿ ಹೂತು ಹೋದ’ ಎಂದು ಹರೀಶ್‌ ತಂದೆ ತಿಮ್ಮಣ್ಣ ದುಃಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.