
ಹಿರಿಯೂರು: ನಗರ ವ್ಯಾಪ್ತಿಯಲ್ಲಿ ಎರಡು ಹಂತದಲ್ಲಿ ಒಳಚರಂಡಿ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎ. ವಾಸೀಂ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2026–27ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ತಯಾರಿಕೆ ಸಂಬಂಧ ಕರೆದಿದ್ದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ವಿಶಾಲವಾದ ಮಾರುಕಟ್ಟೆ, ಬೀದಿಬದಿ ವ್ಯಾಪಾರಿಗಳಿಗೆ ಫುಡ್ ಕೋರ್ಟ್ ನಿರ್ಮಿಸುವ ಯೋಜನೆಗಳಿದ್ದು, ಸದ್ಯದಲ್ಲೇ ಕಾರ್ಯರೂಪಕ್ಕೆ ತರಲಾಗುವುದು. ನಗರದ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೆ ತಕ್ಷಣ ಪರಿಹರಿಸಲು ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು.
ವ್ಯಾಪಾರ, ವಹಿವಾಟು ಅಭಿವೃದ್ಧಿಪಡಿಸಲು ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಬಾಕಿ ಇರುವ ಬಾಡಿಗೆ ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸ್ಥಳೀಯರ ನೆರವಿನೊಂದಿಗೆ ಉದ್ಯಾನಗಳ ಅಭಿವೃದ್ಧಿ ಮಾಡಲಾಗುವುದು ಎಂದು ವಾಸೀಂ ಭರವಸೆ ನೀಡಿದರು.
ವಾಣಿವಿಲಾಸ ಶಿಕ್ಷಣ ಸಂಸ್ಥೆಯ ಹಿಂಭಾಗದ 12 ಅಡಿ ರಸ್ತೆ ಮತ್ತು ಜನತಾ ಸ್ಟೋರ್ ಹಿಂಭಾಗದ ಜಾಗವನ್ನು ಒತ್ತುವರಿ ಮಾಡಿದ್ದು ಅದನ್ನು ತೆರವುಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಬೇಕು ಎಂದು ವಿ.ಶಿವಕುಮಾರ್ ಸಲಹೆ ನೀಡಿದರು.
ವಾರ್ಡ್ ಸಂಖ್ಯೆ 1 ರಿಂದ 7ರವರೆಗಿನ ಪ್ರದೇಶಗಳನ್ನು ಒಳಚರಂಡಿ ಯೋಜನೆಗೆ ಪರಿಗಣಿಸಿಲ್ಲ ಎಂಬ ಮಾಹಿತಿ ಇದೆ. ಕೊಳಚೆ ಪ್ರದೇಶಗಳು ಹೆಚ್ಚಿರುವ ಕಾರಣ ಇಲ್ಲಿಂದಲೇ ಒಳಚರಂಡಿ ಕಾಮಗಾರಿ ಆರಂಭಿಸಬೇಕು. 5ನೇ ವಾರ್ಡ್ ನಿವಾಸಿಗಳಿಗೆ ವಿವಿ ಸಾಗರದ ನೀರು ಪೂರೈಕೆ ಮಾಡಬೇಕು ಎಂದು ಸಿ.ಬಿ. ಮಹಾಲಿಂಗಪ್ಪ ಒತ್ತಾಯಿಸಿದರು.
ಪೌರ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ದಲಿತ ಮುಖಂಡ ಕೆ.ಪಿ. ಶ್ರೀನಿವಾಸ್ ಸಲಹೆ ನೀಡಿದರು.
ಮಾಂಸ ಮಾರುಕಟ್ಟೆಯಿಂದ ನಗರಸಭೆಗೆ ಆದಾಯ ಬರುತ್ತಿಲ್ಲ. ಆದರೂ ಪೌರಕಾರ್ಮಿಕರು ನಿತ್ಯವೂ ಅಲ್ಲಿ ಸ್ವಚ್ಛತೆ ಮಾಡುತ್ತಿದ್ದಾರೆ. ಮಾಂಸ ಮಾರುಕಟ್ಟೆಗೆ ಕಾಯಕಲ್ಪ ಆಗಬೇಕಿದೆ ಎಂದು ಅಬ್ದುಲ್ ಅಜೀಜ್ ಹೇಳಿದರು.
ಹೆಂಜಾರಪ್ಪ, ಶಿವು ಖಂಡೇನಹಳ್ಳಿ, ರಾಘವೇಂದ್ರ, ಅರುಣ್ ಕುಮಾರ್, ಸೈಯದ್ ಮುಷ್ತಾಕ್, ಎಂಜಿನಿಯರ್ ಗುರು, ನಗರಸಭೆ ಎಂಜಿನಿಯರ್ ಶ್ರೀರಂಗಯ್ಯ, ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಮಹಾಲಿಂಗರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.