ADVERTISEMENT

ಉನ್ನಾವೊ ಅತ್ಯಾಚಾರ; ಜಾಮೀನು ರದ್ದತಿಗೆ ಒತ್ತಾಯ

ಕುಲದೀಪ್‌ ಸೆಂಗರ್‌ ಬಿಡುಗಡೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:36 IST
Last Updated 28 ಡಿಸೆಂಬರ್ 2025, 5:36 IST
ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್‌ ಸೆಂಗರ್‌ಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಕಾಂಗ್ರೆಸ್‌ ಮುಖಂಡರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು
ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್‌ ಸೆಂಗರ್‌ಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಕಾಂಗ್ರೆಸ್‌ ಮುಖಂಡರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್‌ ಸೆಂಗರ್‌ಗೆ ಜಾಮೀನು ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ನಗರದ ಒನಕೆ ಓಬವ್ವ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಎಂದು ಪರಿಗಣಿಸಿದ್ದ ಹೈಕೋರ್ಟ್‌ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಸುಪ್ರೀಂ ಕೋರ್ಟ್‌ ಈ ತೀರ್ಪನ್ನು ರದ್ದು ಮಾಡಿ ಅಪರಾಧಿಗೆ ಜಾಮೀನು ಮಂಜೂರು ಮಾಡಿದೆ. ಇದಕ್ಕೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ಪುನರ್‌ ಪರಿಶೀಲನೆ ಮಾಡಬೇಕು. ಆತನನ್ನು ಅಪರಾಧಿ ಎಂದು ಪರಿಗಣಿಸಿ ನ್ಯಾಯಾಲಯ ಜೈಲಿಗೆ ಕಳುಹಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಬಿಜೆಪಿ ಆಡಳಿತದಲ್ಲಿ ಸ್ವಾಯತ್ತ ಸಂಸ್ಥೆಗಳ ಮೇಲೆ ಅನುಮಾನ ಮೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇ.ಡಿ., ಸಿಬಿಐ, ಐಟಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಬಿಜೆಪಿ ನಾಯಕನೂ ಆಗಿದ್ದ ಕುಲದೀಪ್‌ ಸೆಂಗರ್‌ಗೆ ಜಾಮೀನು ಮಂಜೂರು ಮಾಡಿರುವುದನ್ನು ನೋಡಿದರೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನುಮಾನ ಮೂಡುತ್ತದೆ. ಬಿಜೆಪಿ ಆಡಳಿತದಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ವಿರೋಧ ದೇಶದಾದ್ಯಂತ ಮೂಡಿದೆ’ ಎಂದು ಹೇಳಿದರು.

ADVERTISEMENT

ದೇಶದ ಉನ್ನತ ನ್ಯಾಯಾಂಗ ಸಂಸ್ಥೆಯಾದ ಸುಪ್ರೀಂ ಕೋರ್ಟ್‌ ಅತ್ಯಾಚಾರ ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸಬೇಕು. ವಿಚಾರಣೆ ವೇಳೆ ಆತ ಅತ್ಯಾಚಾರ ಎಸಗಿರುವುದು ರುಜುವಾತಾಗಿದೆ. ಅದರ ಆಧಾರದ ಮೇಲೆಯೇ ಹೈಕೋರ್ಟ್‌ ಶಿಕ್ಷೆ ವಿಧಿಸಿದೆ. ಇದನ್ನು ರದ್ದು ಮಾಡಿದರೆ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನುಮಾನ ಬರುವಂತ ಪರಿಸ್ಥಿತಿ ಮೂಡುತ್ತದೆ. ಸೆಂಗರ್‌ಗೆ ಮತ್ತೆ ಶಿಕ್ಷೆ ವಿಧಿಸುವ ಮೂಲಕ ಅನುಮಾನಗಳನ್ನು ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಸಿಸಿಯ ಕಾರ್ಯದರ್ಶಿ ಮಯೂರ ಜಯಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‍ಪೀರ್, ಪ್ರಧಾನ ಕಾರ್ಯದರ್ಶೀ ಸಂಪತ್ ಕುಮಾರ್, ಮುಖಂಡರಾದ ಮೈಲಾರಪ್ಪ, ನಂದಿನಿಗೌಡ, ಕಾರಹಳ್ಳಿ ಉಲ್ಲಾಸ್, ದಾದಾಪೀರ್, ವಾಸಿಂ, ನಿಜಾಂ, ದರ್ಶನ್, ಬಾಬು ಪವನ್, ಚೇತನ್, ಲಕ್ಷ್ಮೀಕಾಂತ, ಮಧುಗೌಡ, ಮುದಸಿರ್, ಖುದ್ಸುಸ್, ಜಯ್ಯಣ್ಣ, ಮನಿರಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.