ನಾಯಕನಹಟ್ಟಿ: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ, ಹಬ್ಬ-ಹರಿದಿನ, ಉತ್ಸವಗಳ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಹಾಕುವ ಸುರಕ್ಷಿತವಲ್ಲದ ಟ್ಯಾಟೂ (ಹಚ್ಚೆ) ಅನಾರೋಗ್ಯಕ್ಕೆ ಮುನ್ನುಡಿ ಬರೆಯುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ, ಉತ್ಸವಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಗೀಳು ಯುವಜನರಲ್ಲಿ ಹೆಚ್ಚಾಗುತ್ತಿದೆ. ಅವರಿಗೆ ಮಾಹಿತಿಯ ಕೊರತೆಯಿಂದ ಮಾರಣಾಂತಿಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಿದೆ. ಸರ್ಕಾರ ಮತ್ತು ಆರೋಗ್ಯ ಇಲಾಖೆಯು ರಕ್ತದಿಂದ ಹರಡುವ ಎಚ್‌ಐವಿ, ಕಾಮಾಲೆ, ತುರಿಕೆ, ಅಲರ್ಜಿಯಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ನಿಮೂರ್ಲನೆ ಮಾಡಲು ಶತಪ್ರಯತ್ನ ಮಾಡುತ್ತಿದೆ. ಇನ್ನೊಂದಡೆ ಜಾತ್ರೆ, ಉತ್ಸವಗಳಲ್ಲಿ ಟ್ಯಾಟೂ ಮೂಲಕ ಇಂತಹ ರೋಗಗಳು ಸಲೀಸಾಗಿ ಹರಡುತ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಹಿಂದಿನಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಸಂಪ್ರದಾಯ ರೂಢಿಯಲ್ಲಿದೆ. ಮಹಿಳೆಯರು ಕೈಗಳ ಮೇಲೆ ವಿವಿಧ ವಿನ್ಯಾಸದ ಚಿತ್ರಗಳನ್ನು ಮತ್ತು ಗಲ್ಲದ ಮೇಲೆ ದೃಷ್ಟಿಬೊಟ್ಟನ್ನು ಹಾಕಿಸಿಕೊಳ್ಳುತ್ತಿದ್ದರು. ಪುರುಷರೂ ತಮ್ಮ ಪ್ರೀತಿಪಾತ್ರರು, ಇಷ್ಟದೈವದ ಹೆಸರು ಹಾಗೂ ಚಿತ್ರಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಸೂಜಿಗಳನ್ನು ಕಪ್ಪು ಶಾಯಿಯಲ್ಲಿ ಅದ್ದಿ ಚುಚ್ಚುತ್ತಿದ್ದರು. ಒಮ್ಮೆ ಸೂಜಿಗಳ ಮೂಲಕ ಚುಚ್ಚಿಸಿಕೊಳ್ಳುತ್ತಿದ್ದ ಹಚ್ಚೆ ಚಿತ್ರವು ಜೀವನಪರ್ಯಂತ ದೇಹದ ಮೇಲೆ ಹಾಗೇ ಇರುತ್ತಿತ್ತು.
ಆದರೆ, ಈಗ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಶಾಯಿಯಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ರೂಢಿಯಲ್ಲಿದೆ. ಇತ್ತೀಚಿನ ದಿನಗಳಲ್ಲಂತೂ ಯುವಜನರಲ್ಲಿ ಹಚ್ಚೆಯ ಹುಚ್ಚು ಜೋರಾಗಿಯೇ ಇದೆ. ದೇಹದ ವಿವಿಧ ಭಾಗಗಳಲ್ಲಿ ನಾನಾ ವಿನ್ಯಾಸದ ಟ್ಯಾಟೂಗಳನ್ನು ಹಾಕಿಕೊಳ್ಳುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳುವಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ ಎಂಬುದು ತಜ್ಞರ ಮಾತು.
ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ಕೊರತೆಯ ಕಾರಣಕ್ಕೋ ಅಥವಾ ಕಡಿಮೆ ಬೆಲೆಗೆ ಹಚ್ಚೆ ಹಾಕಲಾಗುತ್ತದೆ ಎಂಬ ಕಾರಣಕ್ಕೋ ಮುಂಜಾಗೃತೆ ವಹಿಸದೆ ನುರಿತವರಲ್ಲದ (ಕೆಲವೆಡೆ ಚಿಕ್ಕಮಕ್ಕಳೇ ಹಚ್ಚೆ ಹಾಕುತ್ತಾರೆ) ವ್ಯಕ್ತಿಗಳಿಂದ ಹಚ್ಚೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಬಹುತೇಕ ಜಾತ್ರೆಗಳಲ್ಲಿ ಹೆಚ್ಚು ಜನ ಸೇರಿರುವ ಜಾಗದಲ್ಲಿ ಹಚ್ಚೆ ಹಾಕುವ ಪುಟ್ಟ ಅಂಗಡಿಗಳು ತಲೆ ಎತ್ತಿರುತ್ತವೆ. ಇದು ಅಸುರಕ್ಷಿತ.
ಇಂಥ ನುರಿತವರಲ್ಲದವರ ಅಂಗಡಿಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವುದರಿಂದ ಒಬ್ಬರಿಗೆ ಚುಚ್ಚಿದ ಸೂಜಿಯನ್ನೇ ಮತ್ತೊಬ್ಬರಿಗೆ ಚುಚ್ಚುವ ಸಾಧ್ಯತೆ ಇರುತ್ತದೆ. ಇದು ರೋಗ ಹರಡಲು ಕಾರಣವಾಗುತ್ತಿದೆ. ಜಾತ್ರೆಗಳಲ್ಲಿ ಹಚ್ಚೆ ಹಾಕುವ ಬಹುತೇಕರು ಸೂಜಿ ಬದಲಿಸುವುದೇ ಇಲ್ಲ. ಇದರಿಂದ ಅಪಾಯ ಖಚಿತ. ಹಚ್ಚೆ ಹಾಕಿಸಿಕೊಂಡ ಜಾಗದಲ್ಲಿ ತುರಿಕೆ, ಅಲರ್ಜಿಯಂತಹ ಚರ್ಮ ರೋಗಗಳು ಕಾಣಿಸಿಕೊಳ್ಳುತ್ತವೆ. ಸೋಂಕು ಪೀಡಿತ ವ್ಯಕ್ತಿಯ ರಕ್ತ ಅಂಟಿರುವ ಹಚ್ಚೆ ಉಪಕರಣವನ್ನು ಮತ್ತೊಬ್ಬರಿಗೆ ಬಳಸಿದಲ್ಲಿ, ಸೋಂಕು ಅವರಿಗೆ ಸುಲಭವಾಗಿ ಹರಡುತ್ತದೆ. ಹೆಪಟೈಟಿಸ್-ಬಿ, ಎಚ್‌ಐವಿ ಸೇರಿದಂತೆ ವಿವಿಧ ರಕ್ತಸಂಬಂಧಿ ಕಾಯಿಲೆಗಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಸ್ಥಳಿಯ ಆಡಳಿತ ವ್ಯವಸ್ಥೆಯು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆ, ಉತ್ಸವಗಳ ಸಂದರ್ಭ ರಾಜಾರೋಷವಾಗಿ, ಅಸುರಕ್ಷಿತ ಮಾದರಿಯ ಹಚ್ಚೆ ಅಡ್ಡೆಗಳ ಬಗ್ಗೆ ನಿಗಾ ವಹಿಸುವ ಅಗತ್ಯವಿದೆ. ಇಲ್ಲವಾದರೆ ಜಾತ್ರೆ, ಉತ್ಸವಗಳೇ ಮಾರಣಾಂತಿಕ ರೋಗ ಹರಡಲು ವೇದಿಕೆಯಾಗುತ್ತವೆ ಎಂಬುದು ಅವರ ಅಬಿಪ್ರಾಯ.
ತರಬೇತಿ ಪಡೆದವರಿಂದ ಹಚ್ಚೆ ಹಾಕಿಸಿಕೊಳ್ಳಬೇಕು. ಒಬ್ಬರಿಗೆ ಚುಚ್ಚಿದ ಸೂಜೆಯನ್ನು ಮತ್ತೊಬ್ಬರಿಗೆ ಬಳಸುವಂತಿಲ್ಲ. ಒಂದು ವೇಳೆ ಶುಚಿತ್ವ ಮತ್ತು ಸುರಕ್ಷತೆ ಇಲ್ಲದೆ ಹಚ್ಚೆ ಹಾಕಿದರೆ ಕಾಯಿಲೆಗಳು ಹರಡುತ್ತವೆಡಾ.ಎನ್.ಕಾಶಿ ತಾಲ್ಲೂಕು ವೈದ್ಯಾಧಿಕಾರಿ
ಮುಂಬರುವ ಜಾತ್ರೆ ಉತ್ಸವಗಳ ವೇಳೆ ತಂಡವನ್ನು ರಚಿಸಿ ಅಸುರಕ್ಷತೆ ಮಾದರಿಯ ಹಚ್ಚೆ ಹಾಕುವವರನ್ನು ಗುರುತಿಸಿ ಎಚ್ಚರಿಕೆ ನೀಡಲಾಗುವುದುಒ.ಶ್ರೀನಿವಾಸ್ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.