ADVERTISEMENT

ಭದ್ರಾ ಮೇಲ್ದಂಡೆ; ರೈತರನ್ನು ವಂಚಿಸಿದ ಜನಪ್ರತಿನಿಧಿಗಳು: ಈಚಘಟ್ಟದ ಸಿದ್ದವೀರಪ್ಪ

ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ರೈತಸಂಘದ ಮುಖಂಡರು ಕಿಡಿ, ಹೋರಾಟಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:28 IST
Last Updated 10 ಫೆಬ್ರುವರಿ 2026, 5:28 IST
<div class="paragraphs"><p>ಗಾಜನೂರಿನ ತುಂಗಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಕೊಂಡೊಯ್ಯಲು ಕೆ.ಕಣಬೂರು ಬಳಿ ನಿರ್ಮಿಸಿರುವ ಇಂಟೇಕ್ ಕೆನಾಲ್‌</p></div>

ಗಾಜನೂರಿನ ತುಂಗಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಕೊಂಡೊಯ್ಯಲು ಕೆ.ಕಣಬೂರು ಬಳಿ ನಿರ್ಮಿಸಿರುವ ಇಂಟೇಕ್ ಕೆನಾಲ್‌

   

ಪ್ರಜಾವಾಣಿ ವಾರ್ತೆ

ಚಿತ್ರದುರ್ಗ:  ‘ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ 2008ರಿಂದಲೂ ಕುಂಟುತ್ತಾ, ತೆವಳುತ್ತಾ ಸಾಗಿದೆ. ಈ ವಿಚಾರದಲ್ಲಿ ಜನಪ್ರತಿನಿಧಿಗಳು ಸುಳ್ಳು ಭರವಸೆ ನೀಡಿ ವಂಚಿಸುತ್ತಿದ್ದಾರೆ. ಯೋಜನೆ ಜಾರಿಗಾಗಿ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಿದೆ’ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಹೇಳಿದರು.

ADVERTISEMENT

‘ಈಗಲೂ ಜಿಲ್ಲೆಯಲ್ಲಿ ನೀರು ತುಂಬಿಸಲು ಯಾವುದೇ ಕೆರೆಗಳನ್ನು ಸಿದ್ಧಗೊಳಿಸಿಲ್ಲ. ಅಜ್ಜಂಪುರ, ಕಡೂರು, ಹಿರಿಯೂರು ಮತ್ತು ಹೊಸದುರ್ಗ ಜಮೀನುಗಳಿಗೆ ಡ್ರಿಪ್ ಅಳವಡಿಸಿರುವುದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ಆಗಿಲ್ಲ. ಹೊಳಲ್ಕೆರೆಯಲ್ಲಿ ಡ್ರಿಪ್ ಯೋಜನೆ ಆಗಿಲ್ಲ. ಆದರೂ ಜನಪ್ರತಿನಿಧಿಗಳು ಸುಳ್ಳು ಹೇಳುತ್ತಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಬರವನ್ನೇ ಹೊತ್ತು, ಉಣ್ಣುವ ಜಿಲ್ಲೆಯ ಜನರಿಗೆ ಭದ್ರಾ ಮೇಲ್ದಂಡೆ ಯೋಜನೆ ಜೀವನಾಡಿಯಾಗಿದೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಯೋಜನೆ ದಶಕಗಳಿಂದಲೂ ಸಾಕಾರಗೊಂಡಿಲ್ಲ. ಈ ವೇಳೆಗಾಗಲೇ ಈ ಭಾಗಕ್ಕೆ ನೀರು ಹರಿದು ಬರಬೇಕಾಗಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತಿಕ್ಕಾಟದಿಂದಾಗಿ ಕಾಮಗಾರಿ ಕುಂಟುತ್ತಾ ಸಾಗಿದೆ’ ಎಂದರು.

‘ರೈತರು ಬೀದಿಗಿಳಿಯದಿದ್ದರೆ ಈಗಲೂ ಯೋಜನೆ ಪರಿ‍ಪೂರ್ಣವಾಗಿ ಜಾರಿಯಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹಿಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟು ಬಿತ್ತಿದ ಬೆಳೆ ಕೈಗೆ ಬಾರದೇ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಜಿಲ್ಲೆಯಲ್ಲಿ ತಾರತಮ್ಯವಿಲ್ಲದೆ ಪ್ರತಿ ರೈತನ ಜಮೀನಿಗೆ ನೀರು ಹರಿಸಬೇಕು. ಶೀಘ್ರ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಮಳೆಗಾಲದಲ್ಲಿ ನೀರು ಹರಿಸಲೇಬೇಕು’ ಎಂದು ಒತ್ತಾಯಿಸಿದರು.

‘ಹಲವು ವರ್ಷಗಳಿಂದ ನಾವು ಭದ್ರಾ ವಿಚಾರದಲ್ಲಿ ವಂಚನೆಗೆ ಒಳಗಾಗಿದ್ದೇವೆ. ಇನ್ನು ನೀರಿನ ಮೋಸದ ಭರವಸೆಗಳಿಗೆ ಮಣಿಯುವುದಿಲ್ಲ ಎಂಬ ಧೃಡ ಸಂಕಲ್ಪ ಮಾಡಬೇಕು. ಜನಪರ, ಭಾಷಾ ಪರ, ಅಭಿವೃದ್ಧಿಪರ ಸಂಘಟನೆಗಳು, ನಾಗರಿಕರು ಜವಾಬ್ದಾರಿಯಿಂದ ಹೋರಾಟಕ್ಕೆ ಇಳಿಯಬೇಕು’ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆಗ್ರಹಿಸಿದರು.

‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಒಂದು ಸಾವಿರ ಅಡಿ ತಲುಪಿದೆ. ಅಪಾಯದ ಮಟ್ಟ ಮೀರಿ ಪ್ಲೋರೈಡ್ ನೀರು ಕುಡಿಯುತ್ತಿದ್ದೇವೆ. ಕೃಷಿ ಭೂಮಿಯನ್ನು ಕಲುಷಿತಗೊಳಿಸಿದ್ದೇವೆ. ಭೂಮಿಯ ಆರೋಗ್ಯ ಸಂರಕ್ಷಿಸಬೇಕಾದರೆ ನಾಲೆಯ ನೀರು ಹರಿಸಬೇಕಾಗಿದೆ. ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ, ಪರಿಹಾರ ಕೇಳುವ ರೈತರಿಗೆ ಸಕಾಲಕ್ಕೆ ಹಣ ಪೂರೈಸದಿದ್ದರೆ ಜಿಲ್ಲೆಗೆ ನೀರು ಹರಿಸಲು ಸಾಧ್ಯವಿಲ್ಲ’ ಎಂದರು.

‘ಕೇಂದ್ರ ಸರ್ಕಾರ 2022–23ನೇ ಸಾಲಿನ ಬಜೆಟ್‍ನಲ್ಲಿ ಹೇಳಿದಂತೆ ಯೋಜನೆಗೆ ₹ 5,300 ಕೋಟಿ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು. ನಾವು ಫೆ. 4ರಿಂದಲೂ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಯೋಜನೆಗೆ ರಾಜ್ಯ ಸರ್ಕಾರ ಬಜೆಟ್‍ನಲ್ಲಿ 5,000 ಕೋಟಿ ರೂ ಮೀಸಲಿಡಬೇಕು. ಅದಕ್ಕಾಗಿ ಫೆ.10 ರಂದು ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ಬಂದ್ ಮಾಡಲಾಗುವುದು. ಫೆ. 12 ರಂದು ಚಳ್ಳಕೆರೆ ಬಂದ್ ಮಾಡಲಾಗುವುದು. ಇದರೊಂದಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ತಿಳಿಸಿದರು.

‘ಫೆ. 13ರಂದು ನಗರದ ಎಂ.ಜಿ ಸರ್ಕಲ್‍ನಿಂದ ಓಬವ್ವ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಓಬವ್ವ ವೃತ್ತದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಣ್ಣ, ಎರೆಹಳ್ಳಿ ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.