ADVERTISEMENT

ಅಧಿಕಾರಿ ಪರಿಶ್ರಮಕ್ಕೆ ಸಿಕ್ಕಿತು ಯಶಸ್ಸು

ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಘವೇಂದ್ರಗೆ 739ನೇ ರ‍್ಯಾಂಕ್‌

ಜಿ.ಬಿ.ನಾಗರಾಜ್
Published 7 ಏಪ್ರಿಲ್ 2019, 19:45 IST
Last Updated 7 ಏಪ್ರಿಲ್ 2019, 19:45 IST
ಎನ್‌.ರಾಘವೇಂದ್ರ
ಎನ್‌.ರಾಘವೇಂದ್ರ   

ಚಿತ್ರದುರ್ಗ: ‘ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂಬ ಗುರಿ ಹಲವು ವರ್ಷಗಳಿಂದ ಇತ್ತು. ಮೊದಲ ಸಲ ಪರೀಕ್ಷೆ ಎದುರಿಸಿದಾಗ ಕಷ್ಠವೆನಿಸಿತು. ಎರಡು ಮತ್ತು ಮೂರನೇ ಪ್ರಯತ್ನದಲ್ಲಿ ಭರವಸೆ ಮೂಡಿತು. ಸತತ ಪರಿಶ್ರಮ ಇದ್ದರೆ ಯಾವುದೂ ಕಷ್ಟವಲ್ಲ...’

ಯುಪಿಎಸ್‌ಸಿ ಪರೀಕ್ಷೆಯಲ್ಲಿ 739ನೇ ರ‍್ಯಾಂಕ್‌ ಪಡೆದಿರುವ ಚಿತ್ರದುರ್ಗದ ಎನ್‌.ರಾಘವೇಂದ್ರ ಅವರ ವಿಶ್ವಾಸದ ನುಡಿ ಇದು. ಸತತ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಕನಸು ನನಸಾಗಿಸಿಕೊಂಡ ಸಂತಸ ಅವರನ್ನು ಆವರಿಸಿಕೊಂಡಿದೆ. ಉತ್ತಮ ರ‍್ಯಾಂಕ್‌ ಪಡೆಯಲು ಇನ್ನೊಮ್ಮೆ ಪರೀಕ್ಷೆ ಎದುರಿಸಲು ಅವರು ನಿರ್ಧರಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಮಾನಂಗಿ, ರಾಘವೇಂದ್ರ ಅವರ ಊರು. ತಂದೆ ನಾಗರಾಜ್‌ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರು. ತಾಯಿ ಸುಜಾತಾ ಗೃಹಿಣಿ. ಅಕ್ಕ ವೈದ್ಯಯಾಗಿದ್ದು, ತಂಗಿ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ADVERTISEMENT

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ರಾಘವೇಂದ್ರ, ರಾಜ್ಯದ ಹಲವೆಡೆ ಶಿಕ್ಷಣ ಪಡೆದಿದ್ದಾರೆ. ತಂದೆ ವರ್ಗಾವಣೆಯಾಗುತ್ತಿದ್ದ ಸ್ಥಳಕ್ಕೆ ತೆರಳುವುದು ಅನಿವಾರ್ಯವಾಗಿದ್ದರಿಂದ ಚಿತ್ರದುರ್ಗದಲ್ಲಿ 2ನೇ ತರಗತಿವರೆಗೆ ಓದಿದ್ದಾರೆ. 3ರಿಂದ 10ನೇ ತರಗತಿಯವರೆಗೆ ಹೊಸಪೇಟೆಯಲ್ಲಿ ಕಲಿತಿದ್ದಾರೆ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪಿಯುಸಿ, ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ.

‘ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ತಂದೆ ಅಧಿಕಾರಿಯಾಗಿದ್ದರಿಂದ ಕೇಂದ್ರೀಯ ಸೇವೆಗಳ ಬಗ್ಗೆ ಅರಿವಿತ್ತು. ಯುಪಿಎಸ್‌ಸಿ ಪರೀಕ್ಷೆ ಬರೆಯುವಂತೆ ಚಿಕ್ಕಂದಿನಿಂದಲೂ ಪ್ರೇರಣೆ ನೀಡುತ್ತಿದ್ದರು. ಮೊದಮೊದಲು ಇದನ್ನು ತಾತ್ಸಾರದಿಂದಲೇ ನೋಡುತ್ತಿದ್ದೆ. ಪದವಿ ಶಿಕ್ಷಣ ಪಡೆಯುವಾಗ ಇದರ ಮಹತ್ವ ಗೊತ್ತಾಯಿತು’ ಎನ್ನುತ್ತಾರೆ ರಾಘವೇಂದ್ರ.

2012ರಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದ ಇವರು ಆರಂಭದ ಎರಡು ವರ್ಷ ಸ್ಯಾಮ್‌ಸಂಗ್‌ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಉದ್ದೇಶದಿಂದ ಉದ್ಯೋಗಕ್ಕೆ ರಾಜೀನಾಮೆ ನೀಡಿ ದೆಹಲಿಗೆ ತೆರಳಿದರು. ವಾಜಿರಾಮ್‌ ಮತ್ತು ರವಿ ಅಕಾಡೆಮಿಯಲ್ಲಿ 9 ತಿಂಗಳು ತರಬೇತಿ ಮುಗಿಸಿ ಕರ್ನಾಟಕಕ್ಕೆ ಮರಳಿದರು.

‘ನಿತ್ಯ 6 ಗಂಟೆ ತರಬೇತಿ ನೀಡಲಾಗುತ್ತಿತ್ತು. ಇನ್ನುಳಿದ 6 ಗಂಟೆ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಆ ಬಳಿಕ ಪ್ರತಿದಿನ ಸರಾಸರಿ 5 ಗಂಟೆ ಓದುತ್ತಿದ್ದೆ. ಭೂಗೋಳ ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡೆ. ಸಾಮಾನ್ಯ ಜ್ಞಾನಕ್ಕೂ ಒತ್ತು ಕೊಟ್ಟು ಅಧ್ಯಯನ ನಡೆಸಿದೆ’ ಎಂದು ಪರಿಶ್ರಮದ ಹಾದಿಯನ್ನು ಬಿಚ್ಚಿಟ್ಟರು.

2015ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದರು. ಅದೇ ವರ್ಷ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ (ಕೆಪಿಎಸ್‌ಸಿ) ಕೂಡ ಬರೆದರು. 2017ರಲ್ಲಿ ಫಲಿತಾಂಶ ಪ್ರಕಟವಾದಾಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಆಯ್ಕೆಯಾದರು. ದಾವಣಗೆರೆಯಲ್ಲಿ ತರಬೇತಿ ಪೂರ್ಣಗೊಳಿಸಿ ಒಂದೂವರೆ ವರ್ಷದಿಂದ ಭದ್ರಾವತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ನಡುವೆಯೂ ಓದು ಮುಂದುವರಿಸಿ ಗುರಿ ತಲುಪಿದ್ದಾರೆ.

‘ಎಂಜಿನಿಯರಿಂಗ್‌ ಪದವಿ ಬಳಿಕ ಉನ್ನತ ವ್ಯಾಸಂಗ ನಡೆಸಿ ಅಮೆರಿಕದಲ್ಲಿ ಉದ್ಯೋಗ ಮಾಡುವ ಅವಕಾಶವಿತ್ತು. ದೇಶದ ಹೊರಗೆ ಕೆಲಸ ಮಾಡುವುದು ಇಷ್ಟವಾಗಲಿಲ್ಲ. ಪೋಷಕರ ಒತ್ತಾಸೆ ಹಾಗೂ ಸ್ನೇಹಿತರ ಪ್ರೇರಣೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದೆ. ಕೆಎಎಸ್‌ ಹಾಗೂ ಐಎಎಸ್‌ ಎರಡೂ ದೋಣಿಯಲ್ಲಿ ಕಾಲಿಟ್ಟಿದ್ದರಿಂದ ಗುರಿ ತುಲುಪುವುದು ಕೊಂಚ ವಿಳಂಬವಾಯಿತು’ ಎಂಬುದು ರಾಘವೇಂದ್ರ ಅವರ ಅನುಭವ.

ವೈದ್ಯ ಶ್ರೀಕಾಂತ್‌ಗೆ 680ನೇ ರ‍್ಯಾಂಕ್‌:ಕೀಲು ಮತ್ತು ಮೂಳೆ ವೈದ್ಯ ಡಾ.ಡಿ.ಶ್ರೀಕಾಂತ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 680ನೇ ರ‍್ಯಾಂಕ್‌ ಪಡೆದಿದ್ದಾರೆ. ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ನಿವಾಸಿಯಾಗಿರುವ ಇವರು ಬೆಂಗಳೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಧರ್ಮೇಶ್‌ ಮತ್ತು ಜಿ.ಕೆ.ಸುವರ್ಣಮ್ಮ ದಂಪತಿಯ ಪುತ್ರರಾಗಿರುವ ಶ್ರೀಕಾಂತ್‌, ಸಂತ ಜೋಸೆಫರ ಕಾನ್ವೆಂಟ್‌ ಹಾಗೂ ಹಿರಿಯೂರಿನ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ವಿಜಯಪುರದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.