ADVERTISEMENT

ಸಾಧನೆಗೆ ಆಂತರಿಕ ಪ್ರೇರಣೆ ಮುಖ್ಯ: ಐಎಎಸ್‌ ಸಾಧಕಿ ಜಿ. ಮಮತಾ ಅಭಿಮತ

ಎಸ್.ಸುರೇಶ್ ನೀರಗುಂದ
Published 26 ಸೆಪ್ಟೆಂಬರ್ 2021, 4:13 IST
Last Updated 26 ಸೆಪ್ಟೆಂಬರ್ 2021, 4:13 IST
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಗಳಿಸಿದ ಹೊಸದುರ್ಗ ತಾಲ್ಲೂಕಿನ ದೇವಪುರಭೋವಿಹಟ್ಟಿ ಜಿ.ಮಮತಾ ಅವರನ್ನು ಚಿತ್ರದುರ್ಗದ ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಶನಿವಾರ ಸನ್ಮಾನಿಸಿದರು. ತಾಯಿ ಚಂದ್ರಮ್ಮ, ತಂದೆ ಗೋವಿಂದಪ್ಪ ಜೊತೆಗಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಗಳಿಸಿದ ಹೊಸದುರ್ಗ ತಾಲ್ಲೂಕಿನ ದೇವಪುರಭೋವಿಹಟ್ಟಿ ಜಿ.ಮಮತಾ ಅವರನ್ನು ಚಿತ್ರದುರ್ಗದ ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಶನಿವಾರ ಸನ್ಮಾನಿಸಿದರು. ತಾಯಿ ಚಂದ್ರಮ್ಮ, ತಂದೆ ಗೋವಿಂದಪ್ಪ ಜೊತೆಗಿದ್ದಾರೆ.   

ಹೊಸದುರ್ಗ: ಏನೇ ಸಾಧನೆ ಮಾಡಬೇಕೆಂದರೂ ಆಂತರಿಕ ಅಭಿಪ್ರೇರಣೆ ಮುಖ್ಯವಾಗುತ್ತದೆ. ತಂದೆ–ತಾಯಿಯ ಆಜ್ಞಾ ಪಾಲನೆ, ಜೀವನಕ್ಕೊಂದು ನಿಖರ ಗುರಿ, ಓದಿನತ್ತ ಹೆಚ್ಚು ಆಸಕ್ತಿ ತೋರಿ, ಛಲ, ಆತ್ಮವಿಶ್ವಾಸ ಹಾಗೂ ಏಕಾಗ್ರತೆಯಿಂದ ಸತತ ಅಭ್ಯಾಸ ಮಾಡಿದಲ್ಲಿ ಸಾಧನೆ ಸಾಧ್ಯವಾಗುತ್ತದೆ.

ಹೀಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 707ನೇ ರ್‍ಯಾಂಕ್‌ ಪಡೆದ ಹೊಸದುರ್ಗ ತಾಲ್ಲೂಕಿನ ದೇವಪುರ ಭೋವಿಹಟ್ಟಿ ಮೂಲಸೌಕರ್ಯ ವಂಚಿತ ಕುಗ್ರಾಮದ ಗೋವಿಂದಪ್ಪ ಚಂದ್ರಮ್ಮ ಅವರ ಪುತ್ರಿ ಜಿ. ಮಮತಾ ಅವರು ತಮ್ಮ ಮನದಾಳದ ಮಾತು ‘ಪ್ರಜಾವಾಣಿ’ ಜೊತೆಗೆ ಶನಿವಾರ
ಹಂಚಿಕೊಂಡರು.

ಅತಿ ಹಿಂದುಳಿದಿರುವ ಸಮುದಾಯದಲ್ಲಿ ಜನಿಸಿರುವ ಅವರ ತಾಯಿ ಚಂದ್ರಮ್ಮ ಅನಕ್ಷರಸ್ಥೆ. ತಂದೆ ಗೋವಿಂದಪ್ಪ ಪಟ್ಟಣದ ಅನುದಾನಿತ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಡುಬಡತನದಲ್ಲಿ ಜೀವಿಸುತ್ತಿರುವ ಇವರಿಗೆ ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಹಿರಿಯ ಪುತ್ರಿ ಮಮತಾ ತಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಆರಂಭಿಸಿ, ಈಗ ಸಿವಿಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದರು. ಪದವಿ ಮುಗಿದ ನಂತರ ಐಎಎಸ್‌ ಮಾಡಬೇಕು ಎಂಬ ಅಚಲ ಗುರಿ ಇಟ್ಟುಕೊಂಡರು.

ADVERTISEMENT

ತಮ್ಮ ಗುರಿ ಸಾಧನೆಗೆ ಬೆಂಗಳೂರಿನ ಪಿಜಿಯಲ್ಲಿ ಇದ್ದುಕೊಂಡೇ 10 ತಿಂಗಳು ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆದು ಯಶಸ್ಸು ಗಳಿಸಿದರು. ಈ ಯಶಸ್ಸಿನಿಂದ ಅವರ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಸ್ನೇಹಿತರು, ಬಂಧುಗಳು, ಗ್ರಾಮಸ್ಥರು ಸೇರಿ ಇನ್ನಿತರ ಕಡೆಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಪುತ್ರಿಯ ಸಾಧನೆ ಕಂಡ ಅವರ ತಂದೆ–ತಾಯಿ, ಸಹೋದರಿ, ಸಹೋದರರು ಮೊಗದಲ್ಲಿ ಹರ್ಷ ಮೂಡಿದೆ.

‘ನನ್ನ ತಂದೆ ಬಾಲ್ಯದಿಂದಲೂ ಐಎಎಸ್‌ ಅತ್ಯುನ್ನತ ಪರೀಕ್ಷೆ ಇದೆ ಅಂತ ಹೇಳುತ್ತಿದ್ದರು. ನನಗೆ ಆಗ ಆ ಪರೀಕ್ಷೆ ಬಗ್ಗೆ ಒಲವು ಇರಲಿಲ್ಲ. ಸಿವಿಲ್‌ ಎಂಜಿನಿಯರಿಂಗ್‌ ಪದವಿ ಮುಗಿದ ಮೇಲೆ ತಂದೆ ಆಸೆಯಂತೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಲೇಬೇಕು ಎಂಬ ದೃಢನಿರ್ಧಾರ ಮಾಡಿಕೊಂಡು ನಿರಂತರ ಸಿದ್ಧತೆ ಮಾಡಿಕೊಂಡೆ. ಮೊದಲು 2 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಾಗ ಪ್ರಿಲಿಮಿನರಿ ಪಾಸಾಗಲಿಲ್ಲ. ಇದರಿಂದ ನಾನು ಧೃತಿಗೆಡಲಿಲ್ಲ. ಸೋಲೇ ಗೆಲುವಿನ ಸೋಪಾನ ಎಂಬಂತೆ ಆತ್ಮವಿಶ್ವಾಸದಿಂದ ಮತ್ತೆ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಂಡೆ. ನನ್ನ ಈ ತಯಾರಿಗೆ ನನ್ನ ಸಹೋದರ ಹಾಗೂ ಹಿಂದೆ ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಟಿ. ಯೋಗೀಶ್‌ ಅವರು ಹೆಚ್ಚಿನ ಸಹಕಾರ ಹಾಗೂ ಪ್ರೋತ್ಸಾಹ ನೀಡಿದರು. ಇದರಿಂದಾಗಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದ್ದರಿಂದ ತಂದೆ ಕನಸು ನನಸು ಮಾಡಿದ ಖುಷಿ ನನಗಾಗಿದೆ’ ಎಂದು ಮಮತಾ ಮುಗುಳ್ನಕ್ಕರು.

1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಾತ್ರಕ್ಕೆ ಇಂಗ್ಲಿಷ್‌ ಕಲಿಯುವುದು ಕಷ್ಟ ಎಂದು ಭಾವಿಸದೇ, ಇಷ್ಟಪಟ್ಟು ಕಲಿಯಬೇಕು. ಇಂಗ್ಲಿಷ್‌ ಸಾಮಾನ್ಯ ವ್ಯಾಕರಣ, ಕಥೆ ಪುಸ್ತಕ, ದಿನಪತ್ರಿಕೆ ಓದುವುದು, ನ್ಯೂಸ್‌ ಚಾನಲ್‌ ಕೇಳುವುದರಿಂದ ಸುಲಭವಾಗಿ ಇಂಗ್ಲಿಷ್‌ ಭಾಷೆ ಪ್ರೌಢಿಮೆ ಬೆಳೆಸಿಕೊಳ್ಳಬಹುದು. ಈ ಹಂತದಲ್ಲಿ ವಿದ್ಯಾರ್ಥಿಗಳು ವಾಟ್ಸ್‌ಆಪ್‌, ಫೇಸ್‌ಬುಕ್‌ ದಾಸರಾಗಬಾರದು. ಶೈಕ್ಷಣಿಕ ಸಾಧನೆಗೆ ಮಾತ್ರ ಮೊಬೈಲ್‌ ಬಳಸಬೇಕು. ಪ್ರೀತಿ, ಪ್ರೇಮದಂತಹ ಆಸೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಗುರುಹಿರಿಯರ ಹಾಗೂ ಪೋಷಕರ ಸಲಹೆ, ಮಾರ್ಗದರ್ಶನದೊಂದಿಗೆ ಸಾಧನೆಯ ಇಚ್ಛಾಶಕ್ತಿಯಿಂದ ಸಮಯವನ್ನು ವ್ಯರ್ಥ ಮಾಡದೇ ಅಭ್ಯಾಸ ಮಾಡಿದಲ್ಲಿ ಸಾಧನೆ ಸಾಧ್ಯವಾಗುತ್ತದೆ. ಒಮ್ಮೆ ಪರೀಕ್ಷೆಯಲ್ಲಿ ಫೇಲ್‌ ಆದಾಗ ವಿಚಲಿತರಾಗದೇ ಮತ್ತೆ, ಮತ್ತೆ ಸಿದ್ಧತೆ ಮಾಡಿಕೊಂಡಲ್ಲಿ ಯಶಸ್ಸು ಖಂಡಿತಾ ಸಾಧ್ಯವಿದೆ’ ಎಂದು ಮಮತಾ ವಿವರಿಸಿದರು.

ಕನ್ನಡ ಮಾಧ್ಯಮ ಅಡ್ಡಿಯಾಗದು

ಪರೀಕ್ಷೆ ಸಿದ್ಧತೆಗೆ ಅದಿಲ್ಲ, ಇದಿಲ್ಲ ಅಂತ ನಾವು ಇಲ್ಲದಿರುವುದರ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು. ಇರುವುದರಲ್ಲಿಯೇ ನಂಬಿಕೆ ಇಟ್ಟು ಪರೀಕ್ಷೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು. ನಮಗೆ ನಾವೇ ಸ್ಪರ್ಧಾರ್ಥಿ ಎಂದುಕೊಂಡು ಹಿಂದೆ, ನಿನ್ನೆ, ಇಂದು ಏನು ಕಲಿತಿದ್ದೇನೆ. ಇನ್ನೂ ಏನು ಕಲಿಯುವುದರ ಅಗತ್ಯವಿದೆ ಎಂಬುದನ್ನು ನಿರ್ಧರಿಸಿಕೊಂಡು ನಿರಂತರ ಅಧ್ಯಯನ ಮಾಡಬೇಕು. ಗ್ರಾಮೀಣ ಭಾಗದ ಬಹಳಷ್ಟು ವಿದ್ಯಾರ್ಥಿಗಳಿಗೆ ಕಷ್ಟದ ಜೀವನ ಹೇಗಿರುತ್ತದೆ ಎಂಬುದು ತಿಳಿದಿರುತ್ತದೆ. ಅವರಲ್ಲಿರುವ ಅಪ್ರತಿಮ ಪ್ರತಿಭೆಯನ್ನು ಗುರುತಿಸಿ ಪೋಷಕರು ಹಾಗೂ ಶಿಕ್ಷಕರು ಸರಿಯಾದ ಸಲಹೆ ಹಾಗೂ ಮಾರ್ಗದರ್ಶನ ಮಾಡಬೇಕು. ಏಕಾಗ್ರತೆಯಿಂದ ಓದಿನ ಕಡೆ ಹೆಚ್ಚು ಆಸಕ್ತಿ ವಹಿಸಿದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಾವುದೇ ಪರೀಕ್ಷೆ ಸಾಧನೆಗೆ ಕನ್ನಡ ಮಾಧ್ಯಮ ಅಡ್ಡಿಯಾಗದು ಎಂದು ಮಮತಾ ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳ ಸಾಧನೆಯೇ ಆಸ್ತಿ

‘ಎಂ.ಎ, ಬಿ.ಇಡಿ ಪದವಿ ಪಡೆದಿರುವ ನಾನು ಸರ್ಕಾರಿ ನೌಕರಿ ಇಲ್ಲದೇ ಹಲವು ವರ್ಷಗಳ ಕಾಲ ವೇತನ ಇಲ್ಲದೇ ಖಾಸಗಿ ಸಂಸ್ಥೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸಿದೆ. 2004ರಿಂದ ವೇತನ ಸಹಿತ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಬರುವ ಸಂಬಳದಲ್ಲಿಯೇ ಕುಟುಂಬ ನಿರ್ವಹಣೆ, ನನ್ನ ಇಬ್ಬರು ಪುತ್ರಿಯರು, ಇಬ್ಬರು ಪುತ್ರರಿಗೆ ಶಿಕ್ಷಣ ಕೊಡಿಸುತ್ತಿದ್ದೇನೆ. ಮಕ್ಕಳಿಗೆ ಒಡವೆ, ವಸ್ತ್ರ ಕೊಡಿಸಲು ಆಗಲಿಲ್ಲ. ನನ್ನ ಸಹೋದರನ ಪುತ್ರ ಟಿ. ಯೋಗೀಶ್‌ ಅವರು ನನ್ನ ಹಿರಿಯ ಪುತ್ರಿ ಮಮತಾಗೆ ಯುಪಿಎಸ್‌ಸಿ ತರಬೇತಿ ಕೊಡಿಸಲು ಸಹಕರಿಸಿದ್ದರಿಂದ ಯಶಸ್ಸು ಸಿಕ್ಕಿದೆ. ಇನ್ನೊಬ್ಬ ಮಗಳನ್ನು ಐಎಎಸ್‌ ಮಾಡಿಸಬೇಕು ಎಂಬ ಆಸೆಯಿದೆ. ಮಕ್ಕಳ ಅತ್ಯುನ್ನತ ಸಾಧನೆಯೇ ನನಗೆ ಆಸ್ತಿ’ ಎಂದು ಮಮತಾ ಅವರ ತಂದೆ ಗೋವಿಂದಪ್ಪ ತಿಳಿಸಿದರು.

..

ನನ್ನ ತಾಯಿ ಚಂದ್ರಮ್ಮ ಅನಕ್ಷರಸ್ಥೆ ಆಗಿದ್ದರೂ ನನ್ನ ಓದಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರಿಂದ ಸಾಧನೆ ಕಂಡಿದ್ದೇನೆ. ನನ್ನ ಈ ಯಶಸ್ಸು ತಂದೆ–ತಾಯಿ, ಸಹೋದರ ಟಿ. ಯೋಗೀಶ್‌ ಅವರಿಗೆ ಸಲ್ಲುತ್ತದೆ.

-ಜಿ. ಮಮತಾ, ಐಎಎಸ್‌ ಸಾಧಕಿ, ದೇವಪುರ ಭೋವಿಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.