ADVERTISEMENT

ಕಲ್ಲು ಹಾಕಿಕೊಂಡ ಸಿದ್ದರಾಮಯ್ಯ; ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 14:30 IST
Last Updated 2 ಅಕ್ಟೋಬರ್ 2024, 14:30 IST

ಚಿತ್ರದುರ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ತಪ್ಪು ಮುಚ್ಚಲು ಹೋಗಿ ಹತ್ತಾರು ತಪ್ಪು ಮಾಡಿದ್ದಾರೆ. ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿರುವ ಅವರು ರಾಜೀನಾಮೆ ನೀಡಬೇಕು. ಕ್ಲೀಚ್‌ ಚಿಟ್‌ ಸಿಕ್ಕರೆ ಅವರು ಮತ್ತೆ ಮುಖ್ಯಮಂತ್ರಿಯಾಗಲು ನಮ್ಮ ಅಭ್ಯಂತರವಿಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಬುಧವಾರ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮುಖ್ಯಮಂತ್ರಿಯು ಈಗ ಆತ್ಮಸಾಕ್ಷಿ ಬಗ್ಗೆ ಮಾತನಾಡುತ್ತಿದ್ದಾರೆ. ಆತ್ಮಸಾಕ್ಷಿಗಿಂತ ನೈತಿಕತೆ ಮುಖ್ಯವಾಗಿದೆ. ನಾನು ಹಿಂದೆಯೇ ಅವರಿಗೆ ಸಲಹೆ ನಿಡಿದ್ದೆ. ಅವರ ತಪ್ಪುಗಳ ಬಗ್ಗೆ ತಿಳಿಸಿದ್ದೆ. ಆದರೆ ಆಗ ಅವರು ಯಾರ ಮಾತೂ ಕೇಳಲಿಲ್ಲ. ಈಗ ಎಲ್ಲವೂ ಮುಗಿದು ಹೋಗಿದ್ದು ರಾಜೀನಾಮೆ ಮಾತ್ರ ಬಾಕಿ ಇದೆ’ ಎಂದರು.

‘ಸಿದ್ದರಾಮಯ್ಯ ಅವರು ಎಲ್ಲರಂತಲ್ಲ ಎಂಬ ಮಾತಿದೆ. ಆ ಮಾತಿನಂತೆ ಅವರು ನಡೆದುಕೊಳ್ಳಬೇಕು. ಎಲ್ಲರ ರೀತಿ ನೀವೂ ಆಗಬೇಡಿ ಎಂಬುದು ನನ್ನ ಸಲಹೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಒಳ್ಳೆಯದು. ಅವರ ಮೇಲೆ ನನಗೆ ಗೌರವವಿದೆ’ ಎಂದರು.

ADVERTISEMENT

‘ಬೇನಾಮಿ ಆಸ್ತಿ ಪಡೆದುಕೊಳ್ಳುವುದು ಆತ್ಮಸಾಕ್ಷಿಯಾ? ಮುಖ್ಯಮಂತ್ರಿಗಳ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕಾರ ಮಾಡಿದ ದಿನವೇ ಅವರು ರಾಜೀನಾಮೆ ನೀಡಬೇಕಾಗಿತ್ತು. ಈಗಲೂ ಕಾಲ ಮಿಂಚಿಲ್ಲ, ರಾಜೀನಾಮೆ ನೀಡಿ ತನಿಖೆ ಎದುರಿಸಲಿ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.