ADVERTISEMENT

ಮೊಳಕಾಲ್ಮುರು | 'ಎಸ್‌ಟಿಗೆ ಇತರೆ ಸಮುದಾಯ ಸೇರ್ಪಡೆ ಬೇಡ'

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 5:44 IST
Last Updated 11 ಅಕ್ಟೋಬರ್ 2025, 5:44 IST
ಮೊಳಕಾಲ್ಮುರಿನಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು 
ಮೊಳಕಾಲ್ಮುರಿನಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು    

ಮೊಳಕಾಲ್ಮುರು: ಎಸ್‌ಟಿಗೆ ಕುರುಬ ಸೇರಿ ಇತರೆ ಜಾತಿಗಳನ್ನು ಸೇರಿಸುವ ಕುರಿತು ರಾಜ್ಯ ಸರ್ಕಾರ ಮಾಡಲು ಹೊರಟಿರುವ ಶಿಫಾರಸ್ಸು ಕ್ರಮ ಖಂಡಿಸಿ ಶುಕ್ರವಾರ ಇಲ್ಲಿ ಮಹರ್ಷಿ ವಾಲ್ಮೀಕಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

‘ಪರಿಶಿಷ್ಟ ಪಂಗಡವು ಅನಾದಿ ಕಾಲದಿಂದಲೂ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಆಧಾರದಲ್ಲಿ ಬದುಕು ಕಟ್ಟಿಕೊಂಡು ಬಂದಿದೆ. ಇಂತಹ ಸ್ಥಿತಿಯಲ್ಲಿ ಈಚೆಗೆ ರಾಜ್ಯದಲ್ಲಿ ದೊಡ್ಡ ಜನಸಂಖ್ಯೆ ಹೊಂದಿರುವ ಕುರುಬ ಜಾತಿಯನ್ನು ಎಸ್‌ಟಿಗೆ ಸೇರಿಸಲು ರಾಜ್ಯ ಸರ್ಕಾರ ಶಿಫಾರಸ್ಸು ಮಾಡಲು ಹೊರಟಿರುವುದು ನಮ್ಮ ಶಿಕ್ಷಣ, ಸಾಮಾಜಿಕ, ಆರ್ಥಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದರೆ ಉಗ್ರ ಹೋರಾಟ ರೂಪಿಸಲಾಗುವುದು. ಈಚೆಗೆ ಸಚಿವ ಸಂಪುಟದಿಂದ ಎಸ್‌ಟಿ ಜನಾಂಗದ ಇಬ್ಬರು ಸಚಿವರನ್ನು ಕೈಬಿಟ್ಟಿರುವ ಪರಿಣಾಮ ಜನಾಂಗದ ಧನಿ ಕುಗ್ಗಿದೆ. ಎಸ್‌ಟಿ ನಿಗಮದಲ್ಲಿ ಭ್ರಷ್ಟಾಚಾರ ಹೆಚ್ಚಿ ವಿದ್ಯಾರ್ಥಿಗಳಿಗೆ, ರೈತರಿಗೆ, ಬಡವರಿಗೆ ಸಿಗಬೇಕಾಗಿದ್ದ ಸೌಲಭ್ಯಗಳು ಮರೀಚಿಕೆಯಾಗಿದೆ’ ಎಂದು ದೂರಿದರು.

ADVERTISEMENT

‘ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಸೇರಿ ಅನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಪರಿಣಾಮ ಜನಾಂಗದ ಅಭಿವೃದ್ಧಿಗೆ ಅಡ್ಡಿಯಾಗಿದೆ. ನಮ್ಮ ಜನಾಂಗದ ಕಾಲೊನಿಗಳು ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ಕೂಡಲೇ ಇದನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಮಾಜಿ ಶಾಸಕ ಎಸ್.‌ ತಿಪ್ಪೇಸ್ವಾಮಿ, ಎಸ್‌ಟಿ ಮೋರ್ಚಾದ ಪಾಪೇಶ್‌ ನಾಯಕ, ಜೀರಹಳ್ಳಿ ತಿಪ್ಪೇಸ್ವಾಮಿ, ಹಾನಗಲ್‌ ತಿಪ್ಪೇಸ್ವಾಮಿ, ಲಕ್ಷ್ಮೀದೇವಿ ಸಿದ್ದಣ್ಣ, ಎಸ್.‌ ಮಂಜಣ್ಣ, ಸಂಜೀವಪ್ಪ, ನಾಗರಾಜ್‌, ಶಿವಣ್ಣ, ಮಹೇಶ್‌, ಪಾಲಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.