ಹಿರಿಯೂರು: ‘ಧರ್ಮದ ಉಳಿವು, ಅಧರ್ಮದ ಅಳಿವಿನೊಂದಿಗೆ ಮಾನವೀಯತೆಯ ಹಲವು ಮುಖಗಳನ್ನು ಪರಿಚಯಿಸುವ ಮಹಾಕಾವ್ಯ ರಾಮಾಯಣ. ಕೋಟ್ಯಾನುಕೋಟಿ ಜನರ ಹೃದಯಗಳಲ್ಲಿ ಧರ್ಮದ ಬೆಳಕು ಹಚ್ಚಿದ ಶ್ರೇಷ್ಠ ಕವಿ ವಾಲ್ಮೀಕಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕವಿಯಾದವನು ತಾನು ನಂಬಿದ್ದ ತತ್ವಾದರ್ಶಗಳನ್ನು ಮಾತ್ರ ತನ್ನ ಬರವಣಿಗೆಯಲ್ಲಿ ಹೇಳಲು ಸಾಧ್ಯ. ಪುರುಷೋತ್ತಮನಂತಹ ಗುಣಗಳು ವಾಲ್ಮೀಕಿಯಲ್ಲಿ ಇದ್ದ ಕಾರಣಕ್ಕೆ ರಾಮನಂತಹ ಪಾತ್ರ ಸೃಷ್ಟಿ ಸಾಧ್ಯವಾಗಿದೆ. ಆತ್ಮಶುದ್ಧವಾಗಿದ್ದರೆ, ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ಯಾರು ಬೇಕಾದರೂ ಮಹಾನ್ ವ್ಯಕ್ತಿಗಳಾಗಬಹುದು. ನಮ್ಮಲ್ಲಿನ ದುಷ್ಟಗುಣಗಳನ್ನು ದೂರವಿಟ್ಟು, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳೋಣ’ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಸಿದ್ದೇಶ್, ಉಪನ್ಯಾಸ ನೀಡಿದ ಗಂಗಾಧರ್ ಅವರು ವಾಲ್ಮೀಕಿಯವರ ಕಾವ್ಯದಲ್ಲಿನ ಆದರ್ಶಗಳ ಬಗ್ಗೆ ವಿವರಿಸಿದರು.
ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಪೌರಾಯುಕ್ತ ಎ.ವಾಸೀಂ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ, ಎಂ.ಡಿ. ಸಣ್ಣಪ್ಪ, ರತ್ನಮ್ಮ, ಬಿಇಒ ಸಿ.ಎಂ. ತಿಪ್ಪೇಸ್ವಾಮಿ, ಸಿಡಿಪಿಒ ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಇಒ ಪ್ರಮೋದ್, ಮಹೇಶ್ವರರೆಡ್ಡಿ, ಕೃಷಿ ಅಧಿಕಾರಿ ಮಂಜುನಾಥ್, ತೋಟಗಾರಿಕೆ ಅಧಿಕಾರಿ ಶ್ರೀನಿವಾಸ್, ನೌಕರರ ಸಂಘದ ಅಧ್ಯಕ್ಷ ರಮೇಶ್, ಮುಖಂಡರಾದ ಖಾದಿ ರಮೇಶ್, ಈ. ಮಂಜುನಾಥ್, ಬಿ.ಎನ್. ಪ್ರಕಾಶ್, ಮಂಜುನಾಥ್ ಮಾಳಿಗೆ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಆರ್. ನಾಗೇಂದ್ರನಾಯ್ಕ, ಅಂಬಿಕಾ ಆರಾಧ್ಯ, ಕಲ್ಲಹಟ್ಟಿ ಹರೀಶ್, ಹೇಮದಳ ಶ್ರೀಧರ್, ವಿ. ಶಿವಕುಮಾರ್ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಸ್ವಾಗತಿಸಿದರು. ಮಹಮದ್ ಫಯಾಜ್ ನಿರೂಪಿಸಿ, ತಿಪ್ಪೇಸ್ವಾಮಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.