ADVERTISEMENT

ಪಾಳೆಗಾರ ಓಬಣ್ಣನಾಯಕರ ಸಮಾಧಿ ನಾಶ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ

ಪಾಳೆಗಾರ ಓಬಣ್ಣನಾಯಕರ ಸಮಾಧಿ ನಾಶ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:08 IST
Last Updated 27 ಸೆಪ್ಟೆಂಬರ್ 2021, 16:08 IST

ಚಿತ್ರದುರ್ಗ: ಹಿರೇಗುಂಟನೂರು ಹೋಬಳಿಯ ಹಳಿಯೂರು ಗ್ರಾಮದಲ್ಲಿರುವ ಪಾಳೆಗಾರ ಓಬಣ್ಣನಾಯಕರ ಸಮಾಧಿಯನ್ನು ನಾಶಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಒತ್ತಾಯಿಸಿದರು.

ವಾಲ್ಮೀಕಿ ಸಮುದಾಯದ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರನ್ನು ಭೇಟಿ ಮಾಡಿದ ಸ್ವಾಮೀಜಿ ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದರು.

ಚಿನ್ಮೂಲಾದ್ರಿ ಸಂಸ್ಥಾನದ ಮೂಲ ಪುರುಷ ಓಬಣ್ಣನಾಯಕ. ಪ್ರಜೆಗಳಿಗಾಗಿ ಕೆರೆಕಟ್ಟೆಗಳು, ಗುಡಿ–ಗೋಪುರ, ರಕ್ಷಣೆಗಾಗಿ ಕೋಟೆ ಕೊತ್ತಲುಗಳನ್ನು ನಿರ್ಮಿಸಿದ್ದರು. ನಾಡ ರಕ್ಷಣೆಗಾಗಿ ತಮ್ಮ ಪ್ರಾಣ ಪಣವಾಗಿಟ್ಟಿದ್ದರು. ಇವರ ಸಮಾಧಿ ಚಿತ್ರದುರ್ಗ ತಾಲ್ಲೂಕಿನ ಹಳಿಯೂರು ಗ್ರಾಮದ ಜಮೀನಿನಲ್ಲಿ ನಿರ್ಮಿಸಲಾಗಿತ್ತು. ರುದ್ರಾಣಿ ಗಂಗಾಧರ್‌ ಎಂಬುವರು ಇದನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ ಎಂದು ತಿಳಿಸಿದರು.

ADVERTISEMENT

ಈ ಘಟನೆಯ ಕುರಿತು ನಾಯಕ ಸಮಾಜದ ಅನೇಕ ಮುಖಂಡರು ಘಟನಾ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲಿಸಿದ್ದಾರೆ. ಸಮಾಧಿಯಿಂದ ಹೊರ ತೆಗೆದ ಕಲ್ಲುಗಳು ಜಮೀನಿನ ಪಕ್ಕ ಕಂಡಿರುತ್ತವೆ. ದೂರು ಸಲ್ಲಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಸಂಬಂಧಪಟ್ಟ ಘಟನೆಯ ವಿಚಾರವಾಗಿ ತಾವು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಮಾಜಿ ನಗರಸಭೆ ಅಧ್ಯಕ್ಷರು ಬಿ.ಕಾಂತರಾಜು, ಎಚ್.ಜೆ.ಕೃಷ್ಣಮೂರ್ತಿ, ಕೆ.ಟಿ.ಪ್ರಶಾಂತ್‍ಕುಮಾರ್, ಪಿ.ಬಸವರಾಜ್ ಬಚ್ಚಬೋರನಹಟ್ಟಿ, ಪಿ.ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.