ADVERTISEMENT

ಚಿತ್ರದುರ್ಗ: ವರಮಹಾಲಕ್ಷ್ಮಿ ಪೂಜೆ; ಖರೀದಿ ಭರಾಟೆ

ದೇವಿ ಮುಖವಾಡ, ಆಭರಣಗಳ ಖರೀದಿಗೆ ಉತ್ಸಾಹ, ಮಾರುಕಟ್ಟೆಯಲ್ಲಿ ಜನಜಾತ್ರೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:04 IST
Last Updated 8 ಆಗಸ್ಟ್ 2025, 5:04 IST
<div class="paragraphs"><p>ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಹಣ್ಣು ಖರೀದಿಸುತ್ತಿರುವ ಮಹಿಳೆಯರು</p></div>

ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಹಣ್ಣು ಖರೀದಿಸುತ್ತಿರುವ ಮಹಿಳೆಯರು

   

ಚಿತ್ರದುರ್ಗ: ಶುಕ್ರವಾರದ ವರ ಮಹಾಲಕ್ಷ್ಮಿ ವ್ರತಾಚರಣೆ ಅಂಗವಾಗಿ ಗುರುವಾರ ನಗರದ ಮಾರುಕಟ್ಟೆಯಲ್ಲಿ ಮಹಿಳೆಯರು ಸಂಭ್ರಮದಿಂದ ಅಗತ್ಯ ವಸ್ತುಗಳ ಖರೀದಿ ನಡೆಸಿದರು.

ನಗರದ ಸಂತೆ ಹೊಂಡ, ಲಕ್ಷ್ಮಿಬಜಾರ್‌, ಮೆದೇಹಳ್ಳಿ ರಸ್ತೆ, ಗಾಂಧಿ ವೃತ್ತ ಭಾಗದಲ್ಲಿ ಮಹಿಳೆಯರ ಜಾತ್ರೆಯೇ ಸೇರಿತ್ತು. ಈ ವೃತ್ತಗಳನ್ನು ಸೇರುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿತ್ತು. ಹಣ್ಣು, ಹೂವು, ಮಾವಿನ ಸೊಪ್ಪು, ಬಾಳೆದಿಂಡು ಸೇರಿದಂತೆ ಹಬ್ಬಕ್ಕೆ ಅವಶ್ಯವಿರುವ ಪೂಜಾ ಸಾಮಗ್ರಿಗಳ ಮಾರಾಟ ಭರ್ಜರಿಯಾಗಿ ನಡೆಯಿತು.

ADVERTISEMENT

ಕಳೆದ ಎರಡು ದಿನಗಳಿಂದ ನಗರದ ತರಕಾರಿ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ದರ ಗಗನಮುಖಿಯಾದರೂ ಮಹಿಳೆಯರ ಹಬ್ಬದ ಉತ್ಸಾಹಕ್ಕೆ ಬೆಲೆ ಏರಿಕೆ ಅಡ್ಡಿಯಾಗಿಲ್ಲ. ಮಾರುಕಟ್ಟೆಗೆ ಥರಾವರಿ ಲಕ್ಷ್ಮಿ ಮೂರ್ತಿ, ಮುಖವಾಡಗಳು ಬಂದಿವೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮಾಡಿದ ಮುಖವಾಡ, ಕಿರೀಟ ಹಾಗೂ ಇತರ ಒಡವೆಗಳನ್ನೂ ಖರೀದಿ ಮಾಡಿದರು. ₹ 300 ರಿಂದ ₹ 2,000ದವರೆಗಿನ ಮುಖವಾಡಗಳನ್ನು ಮಾರಾಟಕ್ಕೆ ಇಡಲಾಗಿತ್ತು.

‘ಲಕ್ಷ್ಮಿ ಮುಖವಾಡವನ್ನು ತೆಂಗಿನ ಕಾಯಿಯಿಂದ ಮಾಡುತ್ತಿದ್ದೆವು. ಸೀರೆಯುಡಿಸಲು ರಾತ್ರಿಯಿಡೀ ಕೆಲಸ ಹಿಡಿಯುತ್ತಿತ್ತು. ಆದರೆ ಈಗ ಅಂತಹ ಯಾವುದೇ ಸಮಸ್ಯೆ ಇಲ್ಲ. ಸೀರೆ ಉಡಿಸಿರುವ ಸಿದ್ಧ ಮೂರ್ತಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಇದರಿಂದ ವ್ರತಾಚರಣೆ ಸುಲಭವಾಗಿದೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.

ಚಿನ್ನ, ಬೆಳ್ಳಿ ಅಂಗಡಿಗಳಲ್ಲೂ ಗುರುವಾರ ಹೆಚ್ಚಿನ ಜನಸಂದಣಿ ಇತ್ತು. ಲಕ್ಷ್ಮಿ ಪೂಜೆ ಅಂಗವಾಗಿ ಆಭರಣದ ಅಂಗಡಿಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡಲಾಗಿತ್ತು. ಲಕ್ಷ್ಮಿಪೂಜೆ ಅಂಗವಾಗಿ ಚಿನ್ನ–ಬೆಳ್ಳಿ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದರು. ಬೆಳ್ಳಿಯ ಲಕ್ಷ್ಮಿ ಮುಖವಾಡಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದವು.

ಲಕ್ಷ್ಮಿಪೂಜೆ ಅಂಗವಾಗಿ ಹೂವುಗಳ ಬೆಲೆ ಏರಿಕೆಯಾಗಿತ್ತು. ಸೇವಂತಿಗೆ ಹೂವು ಮಾರಿಗೆ ₹ 150 ರಿಂದ ₹ 200 ರವರೆಗೂ ಮಾರಾಟವಾಯಿತು. ಮಲ್ಲಿಗೆ ಹೂವು ಕೂಡ ಪ್ರತಿ ಮಾರಿಗೆ ₹ 200 ಇತ್ತು. 5 ಬಗೆಯ ಹಣ್ಣುಗಳನ್ನು ಖರೀದಿ ಮಾಡಲು ಮಹಿಳೆಯರು ಮುಗಿಬಿದ್ದಿದ್ದರು. ಪ್ರತಿ ಕೆ.ಜಿ ಏಲಕ್ಕಿ ಬಾಳೆಹಣ್ಣು ₹ 100 ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.