ADVERTISEMENT

ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವವನೇ ಗುರು

ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ನವೀನ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 13:54 IST
Last Updated 16 ಜುಲೈ 2019, 13:54 IST

ಚಿತ್ರದುರ್ಗ: ‘ಕತ್ತಲಿನಿಂದ ಬೆಳಕಿನ ಮಾರ್ಗದಲ್ಲಿ ಮುನ್ನಡೆಸುವವನೇ ಗುರು. ಅದಕ್ಕಾಗಿಯೇ ಗುರುವಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ತರ ಸ್ಥಾನವಿದೆ’ ಎಂದು ಹೊಸದುರ್ಗ ಜೀವ ವಿಮಾ ನಿಗಮದ(ಎಲ್‌ಐಸಿ) ಅಭಿವೃದ್ಧಿ ಅಧಿಕಾರಿ ನವೀನ್‌ಕುಮಾರ್ ಹೇಳಿದರು.

ವಾಸವಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ರೋಟರಿ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್, ಸಂಸ್ಕಾರ ಭಾರತಿ, ವಿದ್ಯಾಸಂಸ್ಥೆಯಿಂದ ‘ಗುರು ಪೂರ್ಣಿಮೆ’ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಷ್ಯರ ಏಳ್ಗೆಗಾಗಿ ತನ್ನ ಜ್ಞಾನವನ್ನೆಲ್ಲಾ ಧಾರೆ ಎರೆಯುವುದಕ್ಕೂ ಗುರು ಹಿಂದೆ ಮುಂದೆ ನೋಡುವುದಿಲ್ಲ. ವಿದ್ಯೆ ಅಷ್ಟೇ ಅಲ್ಲದೆ, ವಿವಿಧ ಬಗೆಯ ಕಲೆಗಳನ್ನು ಪ್ರಾಮಾಣಿಕವಾಗಿ ಹೇಳಿಕೊಡುವಂಥ ಪರಂಪರೆ ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ಮುಂದುವರಿದುಕೊಂಡು ಬಂದಿದೆ. ಅದಕ್ಕಾಗಿಯೇ ಗುರು ಪೂರ್ಣಿಮೆ ಮೂಲಕ ಗುರುವಿನ ಸ್ಥಾನದಲ್ಲಿ ಇರುವವರನ್ನು ಸ್ಮರಿಸುವಂಥ ಕೆಲಸ ಮಾಡುತ್ತಾ ಬಂದಿದ್ದೇವೆ’ ಎಂದರು.

ADVERTISEMENT

‘ಸ್ವಾರ್ಥ ಇಲ್ಲದೇ ನಿಸ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳನ್ನು ಧನಾತ್ಮಕ ಚಿಂತನೆಯತ್ತ ತೊಡಗಿಸಿ, ಸಾಧಕರನ್ನಾಗಿ ಮಾಡುವ ಗುರುಗಳು ಶಿಷ್ಯರ ಮನಸ್ಸಿನಲ್ಲಿ ಸದಾ ಕಾಲ ಉಳಿಯುತ್ತಾರೆ. ಇವರಿಬ್ಬರ ನಡುವಿನ ಸಂಬಂಧ ಬಿಡಿಸಲಾಗದ ಅನುಬಂಧ’ ಎಂದು ಬಣ್ಣಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್‌, ‘ಕಲ್ಲನ್ನು ಶಿಲೆಯಾಗಿಸುವಲ್ಲಿ ಶಿಲ್ಪಿ ಹೇಗೆ ಪರಿಶ್ರಮ ಪಡುತ್ತಾನೋ, ಅದೇ ರೀತಿ ವ್ಯಕ್ತಿ ಸುಸಂಸ್ಕೃತನಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳುವಲ್ಲಿಯೂ ಗುರುಗಳ ಪಾತ್ರ ಮಹತ್ವದ್ದಾಗಿದೆ’ ಎಂದು ತಿಳಿಸಿದರು.

‘ಪುರಾಣ ಕಾಲದಿಂದಲೂ ನಮ್ಮಲ್ಲಿ ಗುರುವನ್ನು ಬಹು ಎತ್ತರದ ಸ್ಥಾನದಲ್ಲಿಟ್ಟು ಪೂಜಿಸುವಂಥ ಸಂಸ್ಕೃತಿ ಇದೆ. ಅವರ ಮಾರ್ಗದರ್ಶನ ಶಿಷ್ಯರಿಗೆ ಸದಾ ಶ್ರೀರಕ್ಷೆ ಇದ್ದಂತೆ. ಇಂತಹ ಸ್ಥಾನ ಶಿಕ್ಷಕರಿಗೆ ದೊರೆತ್ತಿದ್ದು, ಅದಕ್ಕೆ ಧಕ್ಕೆ ಉಂಟಾಗದ ರೀತಿಯಲ್ಲಿ ನೋಡುಕೊಳ್ಳುವ ಜವಾಬ್ದಾರಿಯೂ ಇದೆ’ ಎಂದು ಸಲಹೆ ನೀಡಿದರು.

‘ಪ್ರಸ್ತುತ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ಹಾಗೂ ವಿದ್ಯಾರ್ಥಿಗಳ ಮನಮುಟ್ಟುವಂತೆ ಭೋದಿಸುವ ಶೈಲಿ ಅತ್ಯಗತ್ಯವಾಗಿದೆ. 21ನೇ ಶತಮಾನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸವಾಲುಗಳು ನೂರೆಂಟಿದ್ದು, ಅದನ್ನು ಸಮರ್ಪಕವಾಗಿ ಭೇದಿಸುವ ನೈಪುಣ್ಯತೆಯನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು. ವಿದ್ಯೆಯ ಜತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ಕಲಿಸಿಕೊಡಬೇಕು’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಇಒ ನಾಗಭೂಷಣ್, ಜನಪದ ಗಾಯಕ ಚಂದ್ರಪ್ಪ, ರಂಗ ಕಲಾವಿದ ಎಸ್‌.ಬಿ.ರಾಮಸ್ವಾಮಿ, ಯೋಗ ಕ್ಷೇತ್ರದಲ್ಲಿ ಚಂದ್ರಶೇಖರ ಮೇಟಿ, ನಿವೃತ್ತ ಮುಖ್ಯಶಿಕ್ಷಕ ಎಂ.ಎನ್. ಸತ್ಯಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‌ರಾಜು, ಕಾರ್ಯದರ್ಶಿ ರಾಮಲಿಂಗ ಶ್ರೇಷ್ಠಿ, ವ್ಯವಸ್ಥಾಪಕ ಗೋಪಾಲಕೃಷ್ಣ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸುನಿತಾ ಗುಪ್ತಾ, ಸಂಸ್ಕಾರ ಭಾರತಿ ಅಧ್ಯಕ್ಷ ಟಿ.ಕೆ.ನಾಗರಾಜ, ಮಾರುತಿ ಮೋಹನ್, ಮುಖ್ಯ ಶಿಕ್ಷಕಿ ಪಿ.ಎಂ. ಶೈಲಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.