
ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರದ ತಳಕು ಹೋಬಳಿಯ ಗುಡಿಹಳ್ಳಿ ಬಳಿ ನೂತನವಾಗಿ ಬ್ಯಾರೇಜ್ ನಿರ್ಮಾಣಕ್ಕೆ ₹ 35 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿದಿದರು.
ಈ ಭಾಗದಲ್ಲಿ ವೇದಾವತಿ ನದಿ ನೀರು, ಹಳ್ಳಕೊಳ್ಳಗಳ ನೀರು, ಕೆರೆ ಕೋಡಿ ನೀರು ಆಂಧ್ರಕ್ಕೆ ವ್ಯರ್ಥವಾಗಿ ಹರಿಯತ್ತಿದೆ. ಇದನ್ನು ತಡೆಯುವ ಮೂಲಕ ಅಂತರ್ಜಲ ಹೆಚ್ಚಳ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ವಿಶ್ವೇಶ್ವರಯ್ಯ ಜಲ ನಿಗಮದಿಂದ ಅನುದಾನ ಬಿಡುಗಡೆಯಾಗಿದೆ. ಅದೇಶಪತ್ರ ಲಭ್ಯವಾಗಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಬ್ಯಾರೇಜ್ ನಿರ್ಮಾಣದಿಂದ ಚಳ್ಳಕೆರೆ ಮತ್ತು ಹಿರಿಯೂರು ಭಾಗದ ಹಳ್ಳಿಗಳಿಗೆ ಉತ್ತಮ ಸಂಪರ್ಕ ಸಿಗಲಿದೆ. ಹತ್ತಾರು ಹಳ್ಳಿಗಳ ಜನರಿಗೆ ಇದರಿಂದ ಅನುಕೂಲವಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿ ಕೃಷಿಗೆ ಅನುಕೂಲವಾಗಲಿದೆ. ಭದ್ರಾಮೇಲ್ದಂಡೆ ಯೋಜನೆಯಲ್ಲಿ ವಿಧಾನಸಭಾ ಕ್ಷೇತ್ರದ 55 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದ್ದು, ಜನವರಿ ತಿಂಗಳಿನಲ್ಲಿ ನೀರು ಬರುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ನೀರಾವರಿ ಅಧಿಕಾರಿಗಳ ಜತೆ ನಿತ್ಯ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.
ಈಚೆಗೆ ಕ್ಷೇತ್ರದ ಪಟ್ಟಣ ಪಂಚಾಯಿತಿಯೊಂದಕ್ಕೆ ನಾಮ ನಿರ್ದೇಶನ ಮಾಡುವಾಗ ಪರಿಶಿಷ್ಟ ಜಾತಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಕೆಲವರು ನನ್ನ ಮೇಲೆ ದೂರಿದ್ದಾರೆ. 30 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲಾ ಜಾತಿಗಳನ್ನು ನಾನು ಸಮವಾಗಿ ಕಂಡಿದ್ದೇನೆ. ಮುಂದಿನ ದಿನಗಳಲ್ಲಿ ಬೇರೆ ಹುದ್ದೆಗಳಿಗೆ ಆ ಜನಾಂಗದವರನ್ನು ನಿರ್ದೇಶನ ಮಾಡುವ ಮೂಲಕ ಸರಿ ದೂಗಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.