ADVERTISEMENT

ಚಿತ್ರದುರ್ಗ | ವಿಜೃಂಭಣೆಯ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಮೇ 2022, 2:50 IST
Last Updated 16 ಮೇ 2022, 2:50 IST
ಚಳ್ಳಕೆರೆಯಲ್ಲಿ ಭಾನುವಾರ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಚಳ್ಳಕೆರೆಯಲ್ಲಿ ಭಾನುವಾರ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಚಳ್ಳಕೆರೆ: ಇಲ್ಲಿನ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಅಂಗವಾಗಿ ಭಾನುವಾರ ಬೆಳಗಿನ ಜಾವ 4ಕ್ಕೆ ಪುರಂತರ ವೀರನಾಟ್ಯದೊಂದಿಗೆ ಅಗ್ನಿಕುಂಡದ ಆಚರಣೆ ನಡೆಯಿತು.

ನಂತರ ಉಪವಾಸ ವ್ರತ ಕೈಗೊಂಡಿದ್ದನೂರಾರು ಭಕ್ತರು ದೇವಸ್ಥಾನದ ಮುಂಭಾಗದಲ್ಲಿ ಉರುಳು ಸೇವೆ ಮಾಡಿದರು.

ಸಂಜೆ 4.45ಕ್ಕೆ ಮುಕ್ತಿ ಬಾವುಟ, ಹೂವಿನ ಹಾರಗಳ ಹಾರಾಜು ಹಾಗೂ ಮಂಗಳಾರತಿ ಕಾರ್ಯಕ್ರಮ ನಡೆಯಿತು.

ADVERTISEMENT

ನಂತರ ಪುರಂತರ ವೀರನಾಟ್ಯ, ವೀರಗಾಸೆ, ನಂದಿಕೋಲು, ಡೊಳ್ಳು, ಸೋಮನ ಕುಣಿತ, ಭಜನೆ, ಕೋಲಾಟ ಮುಂತಾದ ಜನಪದ ಕಲಾ ಮೇಳಗಳೊಂದಿಗೆ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಹರಕೆ ಹೊತ್ತ ಭಕ್ತರು ಚೂರು ಬೆಲ್ಲ, ಮೆಣಸು, ಮಂಡಕ್ಕಿ, ಶೇಂಗಾ, ವೀಳ್ಯದೆಲೆ, ಮಲ್ಲಿಗೆ, ಕನಕಾಂಬರ ಹೂವು ಮತ್ತು ಬಾಳೆಹಣ್ಣನ್ನು ತೇರಿನ ಮೇಲಕ್ಕೆ ಎಸೆದರು.

ದೇವಸ್ಥಾನದ ಆವರಣದಲ್ಲಿ ಬಲ ಭಾಗದ ಕೊಠಡಿಯೊಂದರಲ್ಲಿ ಮಣ್ಣಿನ ಹೊಸ ಮಡಕೆಗಳಲ್ಲಿ ಮೊಳಕೆ ಒಡೆದಿದ್ದ ಭತ್ತ, ರಾಗಿ, ಹುರುಳಿ, ಹೆಸರು, ಉದ್ದು ಸೇರಿ ಧಾನ್ಯಗಳ ಮಡಿಕೆಗಳಿಗೆ ರೈತರು ಕೈ ಮುಗಿದು ಮುಂಗಾರು ಹಂಗಾಮಿನ ಫಸಲು ಚೆನ್ನಾಗಿ ಬರಲಿ ಎಂದು ದೇವರಲ್ಲಿ ಬೇಡಿಕೊಂಡರು.

ದಾವಣಗೆರೆ, ಬಳ್ಳಾರಿ, ತುಮಕೂರು, ಬೆಂಗಳೂರು, ಶಿವಮೊಗ್ಗ, ತುಮಕೂರು, ಅನಂತಪುರ ಮುಂತಾದ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜೆಡಿಎಸ್ ಮುಖಂಡ ಕೆ.ಸಿ. ವೀರೇಂದ್ರ(ಪಪ್ಪಿ) ಅವರು ₹ 15 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು ಕೂಗಿದರು. ಮುಖಂಡರಾದ ಕೆ.ಟಿ. ಕುಮಾರಸ್ವಾಮಿ, ಎಂ. ರವೀಶ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.