ADVERTISEMENT

ವಾಹನಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:48 IST
Last Updated 17 ಜನವರಿ 2026, 7:48 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಿತು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಿತು   

ಚಿತ್ರದುರ್ಗ: ಜಿಲ್ಲಾ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆ ಖಾಸಗಿ ಸಂಸ್ಥೆಗೆ ಸೇರಿದ ವಾಹನಗಳ ಮೇಲೆ ಅವರ ಕಂಪನಿಗಳಿಗೆ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತು ಪ್ರದರ್ಶಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಅನುಮೋದನೆ ನೀಡಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಒಟ್ಟು 56 ವಿಷಯಗಳನ್ನು ಮಂಡಿಸಲಾಯಿತು. ಅವುಗಳಲ್ಲಿ ಮೂರು ವಿಷಯಗಳು ವಾಹನಗಳ ಮೇಲೆ ಜಾಹಿರಾತು ಪ್ರಚುರಪಡಿಸಲು ಅರ್ಜಿ ಮಂಡನೆಯಾಗಿದ್ದವು. ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟಕ್ಕೆ ಸಂಬಂಧಿಸಿದ ವಾಹನಗಳ ಮೇಲೆ ಜಾಹೀರಾತು ಫಲಕ ಪ್ರಕಟಿಸಲು ಕೋರಿಕೆಗೆ ಮಾನ್ಯ ಮಾಡಲಾಯಿತು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯು ಮಧ್ಯಮವರ್ಗದ ವಾಹನಗಳಿಗೆ ₹ 750, ಭಾರಿ ಸರಕು ಸಾಗಾಣಿಕೆ ವಾಹನಗಳಿಗೆ ₹ 2,000 ಶುಲ್ಕ ವಿಧಿಸುವ ನಿರ್ಣಯ ಕೈಗೊಂಡಿತು.

19 ರಹದಾರಿ ವರ್ಗಾವಣೆ ವಿಷಯಗಳಲ್ಲಿ 16 ಸಾಮಾನ್ಯ ವರ್ಗಾವಣೆ ವಿಷಯಗಳಿದ್ದವು. ರಹದಾರಿದಾರರ ಪರ ವಕೀಲರ ಅಹವಾಲಗಳನ್ನು ಆಲಿಸಿ ಅನುಮೋದನೆ ನೀಡಿದತು. 15 ವಿಷಯಗಳು ಮಾರ್ಗ ವಿಸ್ತರಣೆ ಹಾಗೂ ಮಾರ್ಗ ಕಡಿತ ವಿಷಯಗಳಿದ್ದವು. ಮಜಲು ವಾಹನ ರಹದಾರಿದಾರರ ಪರ ವಕೀಲರ ಅಹವಾಲು ಆಲಿಸಲಾಯಿತು. ಲಿಖಿತ ಅಹವಾಲಗಳನ್ನು ಜ. 31ರವರೆಗೆ ಸಲ್ಲಿಸಲು ಕಾಲಾವಕಾಶ ನೀಡಲಾಯಿತು.

ADVERTISEMENT

ಖಾಸಗಿ ಬಸ್‌ ಮಾಲೀಕರ ಸಂಘದ ಪದಾಧಿಕಾರಿಗಳು ರಹದಾರಿ ವರ್ಗಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಮನವಿ ಮಾಡಿದರು. ಕರ್ನಾಟಕ ಮೋಟಾರು ವಾಹನ ನಿಯಮಗಳ ಅನುಸಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ ಮರಣೋತ್ತರ ರಹದಾರಿ ವರ್ಗಾವಣೆ ಅಧಿಕಾರವನ್ನು ನಿಯಮಾನುಸಾರ ಪ್ರದತ್ತ ಮಾಡಲು ಸಭೆಯು ನಿರ್ಧರಿಸಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್‌ ಎಂ ಕಾಳಿಸಿಂಗೆ, ಆರ್‌ಟಿಒ ಕಚೇರಿ ಅಧೀಕ್ಷಕ ಸಿ.ಡಿ.ಹೇಮಂತ್‍ಕುಮಾರ್ ಇದ್ದರು.