ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಪಾಲವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಟಿ.ಎಸ್.ವೆಂಕಟೇಶ್ ಅವರು ಶಾಲಾ ಆವರಣದಲ್ಲಿ ರೂಪಿಸಿರುವ ಅತ್ಯಾಧುನಿಕ ಪ್ರಯೋಗಾಲಯ ಜಿಲ್ಲೆ, ಹೊರಜಿಲ್ಲೆಗಳಲ್ಲೂ ಪ್ರಸಿದ್ಧಿ ಪಡೆದಿದೆ. ವೆಂಕಟೇಶ್ ಅವರ ಹಂಬಲದ ಪ್ರತಿರೂಪದಂತಿರುವ ‘ಸಾರಾಭಾಯಿ ಶಾಲಾ ವಿಜ್ಞಾನ ಪ್ರಯೋಗಾಲಯ’ ನೋಡಲು ಹೊರಜಿಲ್ಲೆಯ ವಿದ್ಯಾರ್ಥಿಗಳು ಬರುತ್ತಾರೆ. ಪ್ರೌಢಶಾಲೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುತ್ತಿರುವ ಅವರು ತಮ್ಮ ಪ್ರಯೋಗಾಧಾರಿತ ಬೋಧನೆಯ ಮೂಲಕ ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತಿದ್ದಾರೆ.
ಶಿಕ್ಷಣ ಇಲಾಖೆ ಆಯೋಜಿಸುವ ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆಗಳಲ್ಲಿ ವೆಂಕಟೇಶ್ ಅವರ ವಿದ್ಯಾರ್ಥಿಗಳು 11 ಬಾರಿ ಪ್ರತಿನಿಧಿಸಿ ವಿವಿಧ ವಿಭಾಗಗಳಲ್ಲಿ ಬಹುಮಾನ ಬಾಚಿಕೊಂಡಿದ್ದಾರೆ. ಮಕ್ಕಳ ವಿಜ್ಞಾನ ಗೋಷ್ಠಿ, ವಿಜ್ಞಾನ ಸಮಾವೇಶ, ಬಾಲ ವಿಜ್ಞಾನಿ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಕ್ಕಳು ನೂರಾರು ಬಹುಮಾನ ಪಡೆದಿದ್ದಾರೆ. ವೆಂಕಟೇಶ್ ಅವರ ವಿದ್ಯಾರ್ಥಿನಿ ರಮ್ಯಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ವೆಂಕಟೇಶ್ ಅವರು ರಾಜ್ಯಮಟ್ಟದ ವಿಜ್ಞಾನ ತರಬೇತಿ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ. ಆಕಾಶವಾಣಿಯಲ್ಲಿ ವಿಜ್ಞಾನ ಪಾಠ ಬೋಧನೆ ಮಾಡಿದ್ದಾರೆ. ಶಿಕ್ಷಣ ಇಲಾಖೆಯ ವಿಜ್ಞಾನ ಪ್ರಕಟಣೆ, ಶಿಕ್ಷಕರ, ವಿದ್ಯಾರ್ಥಿಗಳ ಕೈಪಿಡಿಗಳಿಗೂ ಸಂಪನ್ಮೂಲ ಒದಗಿಸಿದ್ದಾರೆ. ಶಿಕ್ಷಕರಾಗಿ 18 ವರ್ಷ ಪಾಠ ಬೋಧನೆ ಮಾಡಿದ್ದಾರೆ. ಪಾಲವ್ವನಹಳ್ಳಿ ಶಾಲೆಯಲ್ಲೇ ಅವರು 14 ವರ್ಷದಿಂದ ವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ವಿಜ್ಞಾನ ಅಧ್ಯಯನದತ್ತ ಪ್ರೋತ್ಸಾಹ ನೀಡುತ್ತಿರುವ ಅವರು ವಿವಿಧ ಕೋರ್ಸ್‌ಗಳ ಮಾಹಿತಿ ನೀಡುತ್ತಾರೆ. ಬಡ ಮಕ್ಕಳು ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದಾರೆ. ಬಡತನದ ಕಾರಣಕ್ಕೆ ವಿದ್ಯಾಭ್ಯಾಸ ತೊರೆಯಬಾರದು ಎಂಬ ಕಾರಣಕ್ಕೆ ಅವರಿಗೆ ಸಹಾಯಾಸ್ತ ನೀಡುತ್ತಿದ್ದಾರೆ.
2017ರಲ್ಲಿ ವೆಂಕಟೇಶ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ. ಜೊತೆಗೆ ಹಲವು ಸಂಘಟನೆಗಳು ಅವರನ್ನು ಗೌರವಿಸಿವೆ. ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಅವರು ಹಲವು ಕವಿತೆ, ಲೇಖನ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.