ಚಿತ್ರದುರ್ಗ: ‘ಬಹುತ್ವ ಭಾರತದಲ್ಲಿ ನೂರಾರು ಭಾಷೆ, ಸಾವಿರಾರು ಜಾತಿಗಳಿವೆ. ಬುಡಕಟ್ಟು ಸಂಸ್ಕೃತಿಯುಳ್ಳ ದೇಶ ನಮ್ಮದು’ ಎಂದು ಲೇಖಕ ಎಚ್. ಆನಂದ್ ಕುಮಾರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಈ ನೆಲದ ಬಹುತ್ವ ಎತ್ತಿ ಹಿಡಿದ ಸಂವಿಧಾನ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಬಹುಸಂಖ್ಯಾತರು ಶೋಷಣೆಯಿಂದ ಹೊರ ಬಂದಾಗ ಮಾತ್ರ ಈ ದೇಶದ ಸಂಪತ್ತನ್ನು ಅನುಭವಿಸಲು ಸಾಧ್ಯ’ ಎಂದರು.
‘ಬಹುಸಂಖ್ಯಾತರು ಬಲ ಪಂಥೀಯರ ಮಾತುಗಳನ್ನು ಕೇಳುವಂತಾಗಿರುವುದರಿಂದ ಇನ್ನು ಶೋಷಣೆ ಅನುಭವಿಸಬೇಕಾಗಿದೆ. ಅಂಬೇಡ್ಕರ್ ಇರದಿದ್ದರೆ ಶೋಷಿತರ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು’ ಎಂದು ತಿಳಿಸಿದರು.
‘ಬಹುತ್ವ ಎನ್ನುವುದು ಗಂಭೀರ ಹಾಗೂ ಅವಶ್ಯಕವಾಗಿ ಚರ್ಚೆಯಾಗಬೇಕಿದೆ. ಪ್ರಜಾಪ್ರಭುತ್ವದ ತತ್ವದ ಮೇಲೆ ಬಹುತ್ವ ರಚನೆಯಾಗಿದೆ. ಅಂತಹ ಸಮಾಜವನ್ನು ಬಹುತ್ವ ಎಂದು ಕರೆಯಲಾಗುವುದು. ಬಹುತ್ವ ಮತ್ತು ಭಾಷೆ ಅಪಾಯದಲ್ಲಿದೆ’ ಎಂದು ರಾಜ್ಯ ಘಟಕದ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಎಂ.ರಮೇಶ್ ಹೇಳಿದರು.
‘ಬಹುಸಂಖ್ಯಾತರ ಆಚಾರ, ವಿಚಾರ, ನಂಬಿಕೆಗೆ ಧಕ್ಕೆಯಾಗಿದೆ. ಸಹಿಷ್ಣತೆಯಿಲ್ಲದ ಸಮಾಜ ಸರ್ವಾಧಿಕಾರದ ಕಡೆ ಹೋಗುತ್ತದೆ. ಪುರೋಹಿತಶಾಹಿ, ಬ್ರಾಹ್ಮಣ್ಯ ವ್ಯವಸ್ಥೆಯಲ್ಲಿ ಬಹುತ್ವ ಹಾಳಾಗುತ್ತಿದೆ’ ಎಂದು ಬೇಸರಿಸಿದರು.
ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಬಂಜಾರ ಸೇವಾ ಸಂಘದ ಅಧ್ಯಕ್ಷ ಗಿರೀಶ್ ನಾಯ್ಕ, ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಲಕ್ಷ್ಮಿಕಾಂತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.