ಪ್ರಜಾವಾಣಿ ವಾರ್ತೆ
ಚಿತ್ರದುರ್ಗ: ‘ಸಾಹಸಸಿಂಹ ವಿಷ್ಣುವರ್ಧನ್ ಅವರು ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕಿನಲ್ಲಿ ಮಾನವೀಯ ಮೌಲ್ಯಗಳ ಪ್ರತಿರೂಪವಾಗಿದ್ದರು. ಅವರ ನಿಜವಾದ ವ್ಯಕ್ತಿತ್ವ ಅತ್ಯಂತ ನಮ್ರತೆ ಮತ್ತು ದಯಾ ಗುಣಗಳಿಂದ ಕೂಡಿತ್ತು. ಮಹಿಳೆಯರು, ಹಿರಿಯರು, ಕಿರಿಯರಿಗೆ ನೀಡುತ್ತಿದ್ದ ಗೌರವ ಕರ್ಣನಂತೆ ಕಾಣುತ್ತಿತ್ತು’ ಎಂದು ಲೇಖಕ ಸಿದ್ದಾಪುರ ಶಿವಕುಮಾರ್ ಹೇಳಿದರು.
ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಕೋಟೆ ವಾಯು ವಿಹಾರಿಗಳ ಸಂಘದ ವತಿಯಿಂದ ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
‘ವಿಷ್ಣುವರ್ಧನ್ ಅವರು ಮಾನವೀಯ ಮೌಲ್ಯಗಳು ‘ಆ ಕರ್ಣನಂತೆ’ ಕೃತಿ ರಚನೆಗೆ ಪ್ರೇರಣೆಯಾಯಿತು. ಅಭಿಮಾನಿಗಳಿಂದ ಸಾಹಸಸಿಂಹ ಎಂದು ಕರೆಸಿಕೊಳ್ಳುತ್ತಿದ್ದರೂ ಅವರು ಜನರೊಂದಿಗೆ, ಅಭಿಮಾನಿಗಳೊಂದಿಗೆ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಅದು ಇಂದಿನ ನಟರಿಗೆ ಸ್ಫೂರ್ತಿಯಾಗಬೇಕು’ ಎಂದರು.
‘ಯಾವುದೇ ಕಲಾವಿದ ತಮ್ಮ ಪಾತ್ರಗಳ ಮೂಲಕ ಸಮಾಜದ ಮೇಲೆ ದೊಡ್ಡ ಪ್ರಭಾವ ಬೀರಬಹುದು. ಸ್ಫೂರ್ತಿದಾಯಕ ಪಾತ್ರಗಳು ಕೇವಲ ಮನರಂಜನೆ ನೀಡುವುದಲ್ಲದೆ, ಪ್ರೇಕ್ಷಕರಿಗೆ ಹೊಸ ಆಲೋಚನೆ ಮತ್ತು ಸಕಾರಾತ್ಮಕ ಮೌಲ್ಯಗಳನ್ನು ಕಲಿಸುತ್ತವೆ. ಅಂತಹ ಕೌಟುಂಬಿಕ ಚಲನಚಿತ್ರಗಳ ಮೂಲಕ ಒಡೆದುಹೋದ ಕುಟುಂಬಗಳನ್ನು ಒಟ್ಟುಗೂಡಿಸಿದ ಹಿರಿಮೆ ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ’ ಎಂದು ನಗರಸಭೆ ಸದಸ್ಯ ಆರ್. ಶ್ರೀನಿವಾಸ್ ಹೇಳಿದರು.
‘ನಟ ವಿಷ್ಣುವರ್ಧನ್ ಅವರಿಗೆ ಅವರ ಕರ್ಮಭೂಮಿಯಾದ ಚಿತ್ರದುರ್ಗದ ಮೇಲೆ ಅಪಾರ ಪ್ರೀತಿ ಇತ್ತು. ಇದು ಕೇವಲ ಮಾತಿನಲ್ಲಿ ಮಾತ್ರವಲ್ಲ, ಅವರ ನಡೆ ಮತ್ತು ನುಡಿಗಳಲ್ಲಿಯೂ ಕಾಣುತ್ತಿತ್ತು. ಈ ನೆಲದ ಮೇಲೆ ಅವರಿಗಿದ್ದ ಪ್ರೀತಿಯನ್ನು ಹಲವಾರು ಸಂದರ್ಶನಗಳಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವ್ಯಕ್ತಪಡಿಸಿದ್ದರು’ ಎಂದು ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಅಭಿಪ್ರಾಯಪಟ್ಟರು.
ಸಿದ್ದಾಪುರ ಶಿವಕುಮಾರ್ ಹಾಗೂ ಖ್ಯಾತ ಚಿತ್ರಕಲಾ ಕಲಾವಿದ ಕ್ರಿಯೇಟಿವ್ ವೀರೇಶ್ ಅವರನ್ನು ಸನ್ಮಾನಿಸಲಾಯಿತು. ಗಾಯಕ ನಾಗಭೂಷಣ್ ಅವರು ವಿಷ್ಣುವರ್ಧನ್ ಗೀತೆಗಳನ್ನು ಹಾಡಿ ರಂಜಿಸಿದರು. ಕೂಬ ನಾಯಕ್, ಮಲ್ಲಿಕಾರ್ಜುನಾಚಾರ್, ಸಂಗೇನಹಳ್ಳಿ ಅಶೋಕ್ ಕುಮಾರ್, ರವಿ ಕೆ.ಅಂಬೇಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.