ಹಿರಿಯೂರು: ನಗರದ ದುರ್ಗಿಗುಡಿ ರಸ್ತೆಯಲ್ಲಿರುವ ವಿಠ್ಠಲ ರುಕ್ಮಿಣಿ ದೇವಾಲಯದಲ್ಲಿ ಭಾವಸಾರ ಕ್ಷತ್ರಿಯ ಸಮುದಾಯದ ವತಿಯಿಂದ 17ನೇ ವರ್ಷದ ದಿಂಡಿ ಉತ್ಸವ ಭಾನುವಾರ ವೈಭವದಿಂದ ನಡೆಯಿತು.
ಉತ್ಸವದ ಅಂಗವಾಗಿ ಪ್ರವಚನ, ಕೀರ್ತನೆ, ಭಜನೆ, ಕಲ್ಯಾಣೋತ್ಸವ, ಜ್ಞಾನೇಶ್ವರಿ ಪಾರಾಯಣ ಮಾಡಲಾಯಿತು. ಭಾವಸಾರ ಕ್ಷತ್ರಿಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ನಂತರ ವಿಠಲ ರುಕ್ಮಿಣಿ ದೇವರುಗಳನ್ನು ಬೆಳ್ಳಿರಥದಲ್ಲಿ ಪ್ರತಿಷ್ಠಾಪಿಸಿ, ಸಾಮೂಹಿಕ ಭಜನೆಯೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗಿ ಬಂದ ದಾರಿಯಲ್ಲಿನ ಭಕ್ತರು ವಿಠ್ಠಲ ರುಕ್ಮಿಣಿ ದೇವರಿಗೆ ಪೂಜೆ ಸಲ್ಲಿಸಿದರು. ಮೆರವಣಿಗೆ ನಂತರ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕಾರ್ಯಕ್ರಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಬಿ.ಕೆ. ಮಂಜುನಾಥರಾವ್ ಬೇದ್ರೆ, ಮಹಿಳಾ ಮಂಡಳಿಯ ಅಧ್ಯಕ್ಷೆ ಸರಸ್ವತಿ ರಘುನಾಥ ಗುಜ್ಜಾರ್, ಯುವಕ ಮಂಡಳಿ ಅಧ್ಯಕ್ಷ ಎಂ.ಆರ್.ವಿನಯ್ ಮಹಳದ್ಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.