ADVERTISEMENT

6,000 ಮತ ಹಿನ್ನಡೆ; ಸಂಶಯಕ್ಕೆ ಕಾರಣ: ಸಚಿವ ಡಿ ಸುಧಾಕರ್

31 ಸಾವಿರ ಲೀಡ್ ಕೊಟ್ಟಿದ್ದ ಕ್ಷೇತ್ರದಲ್ಲಿ ಕಡಿಮೆ ಮತ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:17 IST
Last Updated 6 ಅಕ್ಟೋಬರ್ 2025, 6:17 IST
ಹಿರಿಯೂರಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮತಗಳ್ಳತನ ಸಹಿ ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ ಚಾಲನೆ ನೀಡಿದರು
ಹಿರಿಯೂರಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮತಗಳ್ಳತನ ಸಹಿ ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ ಚಾಲನೆ ನೀಡಿದರು   

ಹಿರಿಯೂರು: ‘ವಿಧಾನಸಭಾ ಚುನಾವಣೆಯಲ್ಲಿ 31 ಸಾವಿರ ಮುನ್ನಡೆ ಕೊಟ್ಟಿದ್ದ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.‌ ಚಂದ್ರಪ್ಪ ಅವರಿಗೆ 6 ಸಾವಿರ ಮತಗಳ ಹಿನ್ನಡೆಯಾಗಿದ್ದು ಸಂಶಯಕ್ಕೆ ಕಾರಣವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಮತಗಳ್ಳತನ ಸಹಿ ಸಂಗ್ರಹ ಅಭಿಯಾನʼದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ನಡೆಸಿದ್ದ ಅಖಿಲ ಭಾರತ ಸಮೀಕ್ಷೆಯಲ್ಲಿ ಹಾಗೂ ರಾಜ್ಯಮಟ್ಟದ ಸಮೀಕ್ಷೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಖಡಾಖಂಡಿತವಾಗಿ ಹೇಳಲಾಗಿತ್ತು. ವಿಚಿತ್ರವೆಂದರೆ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಹೆಸರು ಬಹುತೇಕ ಮತದಾರರಿಗೆ ಗೊತ್ತಿರಲಿಲ್ಲ. ಕಾರಜೋಳ ಅವರು ಅನೇಕ ಗ್ರಾಮ ಪಂಚಾಯಿತಿಗಳಿಗೆ ಭೇಟಿಯನ್ನೂ ನೀಡಿರಲಿಲ್ಲ. ಆದರೂ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಕಾಂಗ್ರೆಸ್ ಪಕ್ಷಕ್ಕೆ ಬರುವ ಮತಗಳನ್ನು ಹೇಗೆ ವ್ಯವಸ್ಥಿತವಾಗಿ ಮತ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬುದನ್ನು ರಾಹುಲ್ ಗಾಂಧಿಯವರು ಸಾಕ್ಷಿ ಸಮೇತ ನಿರೂಪಿಸಿದ್ದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳದೇ ಇರುವುದು ಬಿಜೆಪಿ ಜೊತೆ ಆಯೋಗ ಕೈಜೋಡಿಸಿದೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡುವ ಬಿಜೆಪಿ ಪ್ರಯತ್ನಕ್ಕೆ ಕಾಂಗ್ರೆಸ್ ಎಂದಿಗೂ ಅವಕಾಶ ಮಾಡಿ ಕೊಡುವುದಿಲ್ಲ’ ಎಂದು ಸುಧಾಕರ್ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಚಳ್ಳಕೆರೆ ಶಾಸಕ ರಘುಮೂರ್ತಿ, ವಿಧಾನಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ರಾಜ್ಯ ದ್ರಾಕ್ಷಾರಸ ಹಾಗೂ ವೈನ್‌ ಬೋರ್ಡ್‌ ಮಂಡಳಿ ಅಧ್ಯಕ್ಷ ಬಿ. ಯೋಗೇಶ್ ಬಾಬು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್, ಕಾರ್ಯದರ್ಶಿ ಸಂಪತ್ ಕುಮಾರ್ ಮಾತನಾಡಿದರು.

ಪಕ್ಷದ ಮುಖಂಡರಾದ ಗೀತಾ ನಂದಿನಿಗೌಡ, ಬಾಲು ಆಚಾರ್, ಮಂಜುಳಾ, ಅಮೃತೇಶ್ವರ ಸ್ವಾಮಿ, ಖಾದಿ ರಮೇಶ್ ಈರಲಿಂಗೇಗೌಡ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಮಮತಾ, ಸಣ್ಣಪ್ಪ ರತ್ನಮ್ಮ ವಿಠ್ಠಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.