ADVERTISEMENT

ಮತದಾರರ ಪಟ್ಟಿ ಲೋಪಕ್ಕೆ ತಹಶೀಲ್ದಾರ್‌ ಹೊಣೆ: ಪಿ.ಸಿ. ಜಾಫರ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:08 IST
Last Updated 26 ನವೆಂಬರ್ 2022, 4:08 IST
ಪಿ.ಸಿ.ಜಾಫರ್‌
ಪಿ.ಸಿ.ಜಾಫರ್‌   

ಚಿತ್ರದುರ್ಗ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಾಮಾಣಿಕವಾಗಿ ನಡೆಯಬೇಕು. ಪಟ್ಟಿಯಲ್ಲಿ ಲೋಪ ಕಂಡುಬಂದರೆ ತಹಶೀಲ್ದಾರ್‌ ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಸಿ.ಜಾಫರ್ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯದ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಮತದಾರರ ಪಟ್ಟಿ ಪರಿಷ್ಕರಣೆ ನಡೆಯುವಾಗ ತಹಶೀಲ್ದಾರ್‌ ಎಚ್ಚರಿಕೆ ವಹಿಸಬೇಕು. ಎಲ್ಲ ಹೊಣೆಯನ್ನು ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರ ಮೇಲೆ ಹಾಕುವಂತಿಲ್ಲ. ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವಾಗ ನಿಯಮ ಪಾಲಿಸಬೇಕು. ಮಾರ್ಗಸೂಚಿ ಅನುಸರಿಸಿ ಕೆಲಸ ಮಾಡಬೇಕು. ಪ್ರತಿಯೊಂದಕ್ಕೂ ದಾಖಲೆ ಇರಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಪಟ್ಟಿಯಲ್ಲಿರುವ ಮತದಾರರು ಬೂತ್‌ ಅಥವಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು ಸೇರ್ಪಡೆ ಹಾಗೂ ರದ್ದುಪಡಿಸುವ ಪ್ರಕ್ರಿಯೆಗೆ ಮಾರ್ಗಸೂಚಿ ಪಾಲನೆ ಮಾಡಬೇಕು. ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ನೆಪ ಹೇಳುವ ಬದಲು ಪಾರದರ್ಶನಕವಾಗಿ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದರು.

‘ಜಿಲ್ಲೆಯಲ್ಲಿ ಅಂದಾಜು 40 ಸಾವಿರ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ಗುರಿ ನಿಗದಿಯಾಗಿದೆ. ಪದವಿ ಕಾಲೇಜು, ಪಾಲಿಟೆಕ್ನಿಕ್, ಐಟಿಐ, ಸರ್ಕಾರಿ ಹಾಗೂ ಖಾಸಗಿ ಹಾಸ್ಟೆಲ್‌ಗಳಲ್ಲಿ ಮತದಾರರ ನೋಂದಣಿ ಅಭಿಯಾನ ನಡೆಯಬೇಕು. ಅಂಗವಿಕಲರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌.ದಿವಾಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಚಂದ್ರಯ್ಯ, ಉಪ ಕಾರ್ಯದರ್ಶಿ ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ ಇದ್ದರು.

‘15 ಸಾವಿರ ನೋಂದಣಿ’: ಯುವ ಮತದಾರರ ನೋಂದಣಿಯನ್ನು ಕಾಲೇಜು ಹಂತದಲ್ಲಿ ನಡೆಸಲಾಗುತ್ತಿದ್ದು, 15 ಸಾವಿರ ವಿದ್ಯಾರ್ಥಿಗಳ ದಾಖಲೆ ಪಡೆಯಲಾಗಿದೆ. ಮತದಾರರ ಪಟ್ಟಿ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ತಿಳಿಸಿದರು.

‘ಯುವ ಮತದಾರರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಯಿಂದ ಹೊರಗೆ ಉಳಿಯದಂತೆ ಎಚ್ಚರವಹಿಸಲಾಗಿದೆ. ಬೂತ್‌ ಮಟ್ಟದ ಅಧಿಕಾರಿ, ಸಿಬ್ಬಂದಿ ಪ್ರತಿ ಮನೆಗೆ ಭೇಟಿ ನೀಡಿ ಅರ್ಹ ಮತದಾರರ ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘15 ಸಾವಿರ ನೋಂದಣಿ’

ಯುವ ಮತದಾರರ ನೋಂದಣಿಯನ್ನು ಕಾಲೇಜು ಹಂತದಲ್ಲಿ ನಡೆಸಲಾಗುತ್ತಿದ್ದು, 15 ಸಾವಿರ ವಿದ್ಯಾರ್ಥಿಗಳ ದಾಖಲೆ ಪಡೆಯಲಾಗಿದೆ. ಮತದಾರರ ಪಟ್ಟಿ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ತಿಳಿಸಿದರು.

‘ಯುವ ಮತದಾರರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಯಿಂದ ಹೊರಗೆ ಉಳಿಯದಂತೆ ಎಚ್ಚರವಹಿಸಲಾಗಿದೆ. ಬೂತ್‌ ಮಟ್ಟದ ಅಧಿಕಾರಿ, ಸಿಬ್ಬಂದಿ ಪ್ರತಿ ಮನೆಗೆ ಭೇಟಿ ನೀಡಿ ಅರ್ಹ ಮತದಾರರ ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.