ADVERTISEMENT

ಚಿತ್ರದುರ್ಗ ‌| ವಿ.ವಿ.ಸಾಗರ ಸುರಕ್ಷತೆ: ಸಲಹೆ ಉಪೇಕ್ಷೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 8:08 IST
Last Updated 12 ಆಗಸ್ಟ್ 2024, 8:08 IST
ಹಿರಿಯೂರು ತಾಲ್ಲೂಕಿನ ಮಾರಿಕಣಿವೆಯ ವಾಣಿವಿಲಾಸ ಸಾಗರ ಅಣೆಕಟ್ಟೆ (ಸಂಗ್ರಹ ಚಿತ್ರ)
ಹಿರಿಯೂರು ತಾಲ್ಲೂಕಿನ ಮಾರಿಕಣಿವೆಯ ವಾಣಿವಿಲಾಸ ಸಾಗರ ಅಣೆಕಟ್ಟೆ (ಸಂಗ್ರಹ ಚಿತ್ರ)   

ಚಿತ್ರದುರ್ಗ: ಶತಮಾನ ಪೂರೈಸಿದ 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ವಾಣಿವಿಲಾಸ ಸಾಗರ (ವಿ.ವಿ.) ಜಲಾಶಯದ ಸುರಕ್ಷತೆಗೆ ಸಂಬಂಧಿಸಿದಂತೆ ಅಣೆಕಟ್ಟೆ ನಿರ್ಮಾಣ ತಜ್ಞ ಎಸ್.ಬಿ.ಕೊಯಮತ್ತೂರ್ ನೇತೃತ್ವದ ಸಮಿತಿ ಒಂದೂವರೆ ವರ್ಷದ ಹಿಂದೆ ನೀಡಿದ್ದ ಸಲಹೆಗಳನ್ನು ಜಲಸಂಪನ್ಮೂಲ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ.

ಜಲಾಶಯದ ಸುರಕ್ಷತೆಗೆ ಕೊಯಮತ್ತೂರ್‌ ನೀಡಿದ 20 ಸಲಹೆಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಅನುಷ್ಠಾನಗೊಂಡಿವೆ. ಅಣೆಕಟ್ಟೆಯ ಒಡಲಾಳದಲ್ಲಿ ಬೆಳೆದಿದ್ದ ಗಿಡ, ಸಸಿಗಳನ್ನು ತೆರವುಗೊಳಿಸಲಾಗಿದೆ. ಅಣೆಕಟ್ಟೆಯನ್ನು ಶಾಶ್ವತವಾಗಿ ಭದ್ರಪಡಿಸುವ ಸಲಹೆಗಳು ಇನ್ನೂ ಅನುಷ್ಠಾನಗೊಂಡಿಲ್ಲ.

ಅಣೆಕಟ್ಟೆಯ ಹೊರಭಾಗದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವ, ಅಣೆಕಟ್ಟೆಯ ಮೇಲ್ಭಾಗದಲ್ಲಿ ಅಳವಡಿಸಿದ ವಿದ್ಯುತ್‌ ಮೀಟರ್‌ ಹಾಗೂ ಕಂಬಗಳ ಬದಲಾವಣೆ ಕೂಡ ಸಮಿತಿ ಸಲಹೆಯಲ್ಲಿದ್ದವು. ಅಣೆಕಟ್ಟೆ ಭದ್ರಪಡಿಸುವ ನಿಟ್ಟಿನಲ್ಲಿ ಕೆಲ ಪರೀಕ್ಷೆಗಳನ್ನು ನಡೆಸಲಾಗಿದೆ. ವಿದ್ಯುತ್ ಚಾಲಿತ ತೂಬು ವ್ಯವಸ್ಥೆ ಸೇರಿ ಹಲವು ಸುರಕ್ಷತಾ ಕ್ರಮಗಳಿಗೆ ವಿಶ್ವೇಶ್ವರಯ್ಯ ನೀರಾವರಿ ನಿಗಮವು ಜಲಸಂಪನ್ಮೂಲ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

1907ರಲ್ಲಿ ನಿರ್ಮಾಣಗೊಂಡ ವಿ.ವಿ.ಸಾಗರ ಜಲಾಶಯವು 89 ವರ್ಷಗಳ ಬಳಿಕ, 2022ರಲ್ಲಿ ಸುರಿದ ಮಳೆಗೆ ಎರಡನೇ ಬಾರಿ ಭರ್ತಿಯಾಗಿತ್ತು. ಈಚಿನ ವರ್ಷಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡಿದ್ದು ಭೀತಿಗೂ ಕಾರಣವಾಗಿತ್ತು. ಅಣೆಕಟ್ಟೆಯಿಂದ ನೀರು ಸೋರಿಕೆಯ ವದಂತಿಗಳು ಹರಡಿ ನದಿ ಪಾತ್ರದ ಜನರು ಆತಂಕಗೊಂಡಿದ್ದರು. ಜನರಿಗೆ ಧೈರ್ಯ ತುಂಬುವ ಉದ್ದೇಶದಿಂದ ಸರ್ಕಾರ ಎರಡು ಹಂತಗಳಲ್ಲಿ ಜಲಾಶಯವನ್ನು ಪರಿಶೀಲಿಸಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಜ್ಞರ ಸಮಿತಿ 2022ರ ಸೆಪ್ಟೆಂಬರ್‌ನಲ್ಲಿ ಜಲಾಶಯಕ್ಕೆ ಭೇಟಿ ನೀಡಿತ್ತು. ಎಸ್.ಬಿ. ಕೊಯಮತ್ತೂರ್ ನೇತೃತ್ವದ ಸಮಿತಿ ಅದೇ ವರ್ಷದ ಡಿಸೆಂಬರ್‌ನಲ್ಲಿ ಪರಿಶೀಲನೆ ನಡೆಸಿತ್ತಲ್ಲದೆ, ಕೇರಳದ ಐರೋ ಟೆಕ್ನಾಲಜಿ ಸಂಸ್ಥೆಯ ಎರಡು ಜಲಾಂತರ್ಗಾಮಿ ಕ್ಯಾಮೆರಾಗಳನ್ನು ನೀರಿನ ಆಳಕ್ಕೆ ಇಳಿಸಿ ವೀಕ್ಷಿಸಿತ್ತು.

‘ವಾಣಿವಿಲಾಸ ಜಲಾಶಯ ಉಳಿದ ಜಲಾಶಯಗಳಿಗಿಂತ ಭಿನ್ನ. ಅಣೆಕಟ್ಟೆ ತುಂಬಿದಾಗ ಹೆಚ್ಚುವರಿ ನೀರು ಕೋಡಿಯ ಮೂಲಕ ವೇದಾವತಿ ನದಿಗೆ ಹರಿದು ಹೋಗುತ್ತದೆ. ನೀರು ಹರಿಸಲು ಇಲ್ಲಿ ಗೇಟ್‌ ವ್ಯವಸ್ಥೆ ಇಲ್ಲ. ತೂಬುಗಳನ್ನು ಎತ್ತಿ ನಾಲೆಗೆ ನೀರು ಹರಿಸುವ ವ್ಯವಸ್ಥೆ ಮಾತ್ರ ಇದೆ. ಸುರಕ್ಷತೆಗೆ ಸಂಬಂಧಿಸಿದಂತೆ ತಜ್ಞರು ನೀಡಿದ ಸಲಹೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ’ ಎನ್ನುತ್ತಾರೆ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿಜಯ ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.