ADVERTISEMENT

ಹೊಳಲ್ಕೆರೆ: ಸ್ವಚ್ಛತೆಯ ಜಾಗೃತಿಗೆ ಗೋಡೆ ಚಿತ್ತಾರ!

ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಿಂದ ವಿನೂತನ ಕಾರ್ಯಕ್ರಮ

ಸಾಂತೇನಹಳ್ಳಿ ಸಂದೇಶ ಗೌಡ
Published 29 ನವೆಂಬರ್ 2020, 2:20 IST
Last Updated 29 ನವೆಂಬರ್ 2020, 2:20 IST
ಹೊಳಲ್ಕೆರೆಯ ತಾಲ್ಲೂಕು ಕಚೇರಿ ಕಾಂಪೌಂಡ್ ಮೇಲೆ ಬರೆದಿರುವ ಚಿತ್ರಕಲೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಮುಖ್ಯಾಧಿಕಾರಿ ವಾಸಿಂ ವೀಕ್ಷಿಸಿದರು
ಹೊಳಲ್ಕೆರೆಯ ತಾಲ್ಲೂಕು ಕಚೇರಿ ಕಾಂಪೌಂಡ್ ಮೇಲೆ ಬರೆದಿರುವ ಚಿತ್ರಕಲೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಮುಖ್ಯಾಧಿಕಾರಿ ವಾಸಿಂ ವೀಕ್ಷಿಸಿದರು   

ಹೊಳಲ್ಕೆರೆ: ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿನ ಪಟ್ಟಣ ಪಂಚಾಯಿತಿ ಸರ್ಕಾರಿ ಕಟ್ಟಡಗಳ ಗೋಡೆ, ಕಾಂಪೌಂಡ್, ತಂಗುದಾಣಗಳಲ್ಲಿ ಬಣ್ಣದ ಚಿತ್ರಗಳನ್ನು ಬರೆಯಿಸುವ ವಿನೂತನ ಕಾರ್ಯಕ್ರಮ ನಡೆಸುತ್ತಿದೆ.

ಸ್ವಚ್ಛ ಸರ್ವೇಕ್ಷಣೆ-2021ರ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾಹಿತಿ ನೀಡಲು ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಒಂದು ಭಾಗವಾಗಿ ಗೋಡೆಗಳಿಗೆ ಚಿತ್ರಕಲೆ ಬರೆಯಿಸಲಾಗುತ್ತಿದೆ. ಚಿತ್ರಗಳೊಂದಿಗೆ ಸ್ವಚ್ಛತೆಗೆ ಸಂಬಂಧಿಸಿದ ಗೋಡೆಬರಹಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಹಾಗೂ ಬಯಲುಶೌಚ ನಿಷೇಧ, ಮೂಲದಲ್ಲಿಯೇ ತ್ಯಾಜ್ಯಗಳ ವಿಂಗಡಣೆ, ಪರಿಸರ ಹಾಗೂ ಜಲ ಮೂಲಗಳ ಸಂರಕ್ಷಣೆ, ರಸ್ತೆಗಳಲ್ಲಿ ಕಸ ಸುರಿಯದಿರುವುದು ಸೇರಿ ಹಲವು ಉತ್ತಮ ಸಂದೇಶಗಳನ್ನು ಒಳಗೊಂಡ ಚಿತ್ರಗಳನ್ನು ಬರೆಯಿಸಲಾಗುತ್ತಿದೆ.

‘ಸ್ವಚ್ಛ ಸರ್ವೇಕ್ಷಣೆ-2020ರಲ್ಲಿ ನಮ್ಮ ಪಟ್ಟಣ ಪಂಚಾಯಿತಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿತ್ತು. ಪಟ್ಟಣದ ನಾಗರಿಕರು, ಸಂಘ, ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಗ್ರ ಶ್ರೇಯಾಂಕ ಪಡೆದಿತ್ತು. ಈ ಪ್ರಶಸ್ತಿಯನ್ನು ಕೇವಲ ಸ್ವಚ್ಛತೆಯ ಮಾನದಂಡದಿಂದ ಕೊಡುವುದಿಲ್ಲ. ಸಾರ್ವಜನಿಕರ ಸಹಭಾಗಿತ್ವವನ್ನು ಪರಿಗಣಿಸಲಾಗುತ್ತದೆ. ಗಲೀಜು ಗೋಡೆಗಳಿದ್ದರೆ ಜನ ಅವುಗಳ ಮೇಲೆ ಉಗಿಯುವುದು, ಮೂತ್ರ ವಿಸರ್ಜನೆ ಮಾಡುವ ಮೂಲಕ ಮತ್ತಷ್ಟು ಕಲ್ಮಶಗೊಳಿಸುತ್ತಾರೆ. ಗೋಡೆಗಳ ಮೇಲೆ ಸುಂದರ ಚಿತ್ರ ಬಿಡಿಸಿದರೆ ಅದನ್ನು ವಿರೂಪಗೊಳಿಸಲು ಜನರಿಗೆ ಮನಸ್ಸು ಬರುವುದಿಲ್ಲ. ಅಲ್ಲದೆ ಪಟ್ಟಣವೂ ಸುಂದರವಾಗಿ ಕಾಣುತ್ತದೆ. ಸ್ವಚ್ಛ ಸರ್ವೇಕ್ಷಣೆ-2021ರಲ್ಲಿ ಮತ್ತೊಮ್ಮೆ ಪಟ್ಟಣ ಉತ್ತಮ ಶ್ರೇಯಾಂಕ ಪಡೆದು ಪ್ರಶಸ್ತಿ ಪಡೆಯುವ ಗುರಿ ನಮ್ಮದು. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು’ ಎಂದು ಮುಖ್ಯಾಧಿಕಾರಿ ವಾಸಿಂ ಹೇಳುತ್ತಾರೆ.

ADVERTISEMENT

‘ಪಟ್ಟಣದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಶೀಘ್ರ ವಾರ್ಡ್ ಮಟ್ಟದಲ್ಲಿ ಸ್ವಚ್ಛ ಸರ್ವೇಕ್ಷಣೆ–2021ಕ್ಕೆ ಸಂಬಂಧಿಸಿದಂತೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ ಅಶೋಕ್ ತಿಳಿಸಿದರು.

‘ಪಟ್ಟಣವನ್ನು ಈಗಾಗಲೇ ‘ಬಯಲು ಶೌಚಮುಕ್ತ ಪಟ್ಟಣ’ ಎಂದು ಘೋಷಣೆ ಮಾಡಲಾಗಿದೆ. ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗಿದೆ. ಸಾರ್ವಜನಿಕ ಶೌಚಾಲಯಗಳನ್ನೂ ನಿರ್ಮಾಣ ಮಾಡಲಾಗಿದೆ. ಸುಂದರ ಪಟ್ಟಣ ರೂಪಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಉಪಾಧ್ಯಕ್ಷ ಕೆ.ಸಿ.ರಮೇಶ್ ಹಾಗೂ ಸದಸ್ಯರಾದ ಸೈಯದ್ ಸಜೀಲ್, ಸೈಯದ್ ಮನ್ಸೂರ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.