ಹಿರಿಯೂರು: ರಾಜ್ಯದೆಲ್ಲೆಡೆ ಮುಂಗಾರು ಆರ್ಭಟಿಸುತ್ತಿದೆ. ಆದರೆ, ತಾಲ್ಲೂಕಿನ ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೋಡಿಹಟ್ಟಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ.
ಗ್ರಾಮದಲ್ಲಿ 1,000ಕ್ಕೂ ಅಧಿಕ ಜನಸಂಖ್ಯೆಯಿದ್ದು, ನಾಲ್ಕು ಕೊಳವೆ ಬಾವಿ ಕೊರೆಯಿಸಲಾಗಿದೆ. ಅವುಗಳಲ್ಲಿ ಎರಡರಲ್ಲಿ ನೀರು ದೊರೆತಿಲ್ಲ. ಉಳಿದ ಎರಡರಲ್ಲಿ ಕಾಲುವೆಗಳಲ್ಲಿ ನೀರು ಹರಿಯುವಂತಹ ಮಳೆ ಬಂದರೆ ಎಂಟ್ಹತ್ತು ದಿನ ನೀರು ಬರುತ್ತದೆ. ಈಗ ಗ್ರಾಮದಿಂದ 700 ಮೀಟರ್ ದೂರದಲ್ಲಿರುವ ದೇವಸ್ಥಾನದ ಮುಂದಿನ ಕೊಳವೆ ಬಾವಿಯಲ್ಲಿ ಮಾತ್ರ ದಿನಕ್ಕೆ 15ರಿಂದ 20 ನಿಮಿಷ ನೀರು ಬರುತ್ತದೆ. ಇಷ್ಟೇ ನೀರನ್ನು ಇಡೀ ಊರಿನ ಜನ ಸಾಲಿನಲ್ಲಿ ನಿಂತು ಕೊಡದಲ್ಲಿ ತುಂಬಿಸಿ ಒಯ್ಯಬೇಕಿದೆ.
‘ಒಂದು ವರ್ಷದಿಂದ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿಗೆ ಮೊರೆ ಇಡುತ್ತಿದ್ದೇವೆ. 15–20 ನಿಮಿಷ ಬರುವ ನೀರನ್ನು ಇಡೀ ಊರಿನ ಜನ ಹೇಗೆ ಬಳಸಿಕೊಳ್ಳಬೇಕು? ನಮ್ಮೂರಿನಲ್ಲಿ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದು, ಅವರಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲ. ಒಬ್ಬರು ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಹೋರಾಟ ಮಾಡಲು ಮುಂದಾದರೆ ಮತ್ತೊಬ್ಬರು ಅಂತಹ ಸಮಸ್ಯೆ ಇಲ್ಲ, ಎಂದು ಅಡ್ಡಗಾಲು ಹಾಕುತ್ತಾರೆ. ಇವರಿಬ್ಬರ ನಡುವಿನ ವ್ಯತ್ಯಾಸಕ್ಕೆ ಹಳ್ಳಿಯ ಜನ ಬಲಿಯಾಗುತ್ತಿದ್ದೇವೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ ಎಂದು ಗ್ರಾಮಸ್ಥ ಶಶಿಕುಮಾರ್.
ತಮ್ಮೂರಿನ ಕೆರೆಯಿಂದ ನೀರು ಕೊಡಲು ಮುಂದಾದರೆ ತಮಗೆ ತೊಂದರೆ ಆಗುತ್ತದೆ ಎಂದು ಗೌಡನಹಳ್ಳಿ ಗ್ರಾಮದವರು ತಗಾದೆ ತೆಗೆಯುತ್ತಾರೆ. ಹಿಂದೆ ಗಂಜಲಗುಂಟೆ ಗ್ರಾಮಕ್ಕೆ ನೀರು ಕೊಡುವ ವಿಚಾರದಲ್ಲೂ ಪರಸ್ಪರ ತಿಕ್ಕಾಟ ಉಂಟಾಗಿತ್ತು. ಹೀಗಾಗಿ ನಮ್ಮೂರಿಗೆ ಪ್ರತ್ಯೇಕ ವ್ಯವಸ್ಥೆಯ ಮೂಲಕ ನೀರು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಲ್ಲುವಳ್ಳಿ ಭಾಗಕ್ಕೆ ಸೇರಿರುವ ದಿಂಡಾವರ, ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳು ಹಿಂದಿನ 25–30 ವರ್ಷದಲ್ಲಿ ಮೂರ್ನಾಲ್ಕು ಬಾರಿ ಮಾತ್ರ ಭರ್ತಿಯಾಗಿವೆ. ಹೀಗಾಗಿ ಅಂತರ್ಜಲ ಕುಸಿದು ನೂರಾರು ಎಕರೆ ಪ್ರದೇಶದಲ್ಲಿನ ಅಡಿಕೆ, ತೆಂಗು, ದಾಳಿಂಬೆ ಬೆಳೆ ಒಣಗಿ ಹೋಗಿದೆ. ವಾಣಿವಿಲಾಸ ಜಲಾಶಯದಿಂದ ಈ ಭಾಗದ 16 ಕೆರೆಗಳಿಗೆ ನೀರು ತುಂಬಿಸಿದರೆ ಮಾತ್ರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಬದ್ಧತೆ ತೋರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.