ADVERTISEMENT

ಚಿತ್ರದುರ್ಗ | ಪೈಲ್‍ಲೈನ್‍ ಒಡೆಯುತ್ತಿರುವ ದುಷ್ಕರ್ಮಿಗಳು

ಅಕ್ರಮ ನಲ್ಲಿ ಸಂಪರ್ಕ ಕಡಿತಗೊಳಿಸಿದ್ದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 15 ಮೇ 2022, 4:11 IST
Last Updated 15 ಮೇ 2022, 4:11 IST
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚನ್ನಬಸಯ್ಯನಹಟ್ಟಿ ಗ್ರಾಮಕ್ಕೆ ಸರಬರಾಜು ಆಗುವ ಪೈಪ್‍ಲೈನ್ ಒಡೆದಿರುವುದು
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚನ್ನಬಸಯ್ಯನಹಟ್ಟಿ ಗ್ರಾಮಕ್ಕೆ ಸರಬರಾಜು ಆಗುವ ಪೈಪ್‍ಲೈನ್ ಒಡೆದಿರುವುದು   

ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಳೇ ಚನ್ನಬಸಯ್ಯನಹಟ್ಟಿ, ಹೊಸ ಚನ್ನಬಸಯ್ಯನಹಟ್ಟಿ ಕೊಂಡಯ್ಯನಕಪಿಲೆ ಗ್ರಾಮಗಳಿಗೆ ಸರಬರಾಜು ಆಗುವ ಕುಡಿಯುವ ನೀರಿನ ಪೈಪ್‍ಲೈನ್‍ಗಳನ್ನು ಯಾರೋ ದುಷ್ಕರ್ಮಿಗಳು ಪದೇಪದೇ ಒಡೆದು ಹಾಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ನಾಯಕನಹಟ್ಟಿ ಪಟ್ಟಣ ಸೇರಿ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರಿನ ಜಲಮೂಲವಾಗಿರುವುದು ಗುರುತಿಪ್ಪೇರುದ್ರಸ್ವಾಮಿ ದೊಡ್ಡಕೆರೆ. ಈ ದೊಡ್ಡಕೆರೆಯು ನಾಯಕನಹಟ್ಟಿ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. 2005ರಲ್ಲಿ ದೊಡ್ಡಕೆರೆಯಲ್ಲಿ ಹತ್ತಾರು ಕೊಳವೆಬಾವಿಗಳನ್ನು ಕೊರೆಯಿಸಿ ಪೈಪ್‍ಲೈನ್ ಮೂಲಕ ಕೊಂಡಯ್ಯನಕಪಿಲೆ, ಹೊಸ ಚನ್ನಬಸಯ್ಯನಹಟ್ಟಿ, ಹಳೇ ಚನ್ನಬಸಯ್ಯನಹಟ್ಟಿ, ನಾಯಕನಹಟ್ಟಿ ಪಟ್ಟಣದ 10 ವಾರ್ಡ್‌ಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ದೊಡ್ಡಕೆರೆಯಿಂದ ಪೈಪ್‍ಲೈನ್‍ಗಳು ಕೊಂಡಯ್ಯನ ಕಪಿಲೆ ಮೂಲಕ ಹಾದುಬಂದಿವೆ. ಪೈಪ್‍ಲೈನ್ ಹಾದುಬರುವ ಮಾರ್ಗಮಧ್ಯದಲ್ಲಿರುವ ಕೆಲ ಜಮೀನಿನ ರೈತರು ಅಕ್ರಮವಾಗಿ ನಲ್ಲಿ ಸಂಪರ್ಕ ಪಡೆದು ಜಮೀನುಗಳಿಗೆ ನೀರು ಹರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

ಇದರಿಂದ ಮುಂದಿನ ಗ್ರಾಮಗಳಿಗೆ ಸಮರ್ಪಕವಾಗಿ ನೀರು ದೊರೆಯುತ್ತಿರಲಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಹಲವು ಬಾರಿ ದೂರು ಸಲ್ಲಿಸಲಾಗಿತ್ತು.

ADVERTISEMENT

ಏಪ್ರಿಲ್ 19ರಂದು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಎನ್.ರಘುಮೂರ್ತಿ ಅವರ ನೇತೃತ್ವದ ಅಧಿಕಾರಿಗಳ ತಂಡ ದೊಡ್ಡಕೆರೆಯಿಂದ ಪೈಪ್‍ಲೈನ್ ಸರ್ವೆ ನಡೆಸಿ ಪೈಪ್‍ಲೈನ್ ಹಾದುಹೋಗಿರುವ ಮಾರ್ಗದುದ್ದಕ್ಕೂ ಇದ್ದ ಅಕ್ರಮ ನಲ್ಲಿ ಸಂಪರ್ಕಗಳನ್ನು ಕಡಿತಗೊಳಿಸಿದ್ದರು.

ಕೆಲ ದುಷ್ಕರ್ಮಿಗಳು ಮೂರು ದಿನಗಳಲ್ಲಿ 3 ಬಾರಿ ಕುಡಿಯುವ ನೀರಿನ ಮುಖ್ಯ ಪೈಪ್‍ಲೈನ್‍ಗಳಿಗೆ ಹಾರೆ ಹಾಕಿ ಪೈಪ್‍ಲೈನ್‍ಗಳನ್ನು ಹಾಳು ಮಾಡಿದ್ದಾರೆ. ಇದರಿಂದ ನೀರಿನ ಸಮಸ್ಯೆ ಉಂಟಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಟಿ. ಕೋಡಿಭೀಮರಾಯ, ‘ಪರವಾನಗಿ ಪಡೆಯದೆ ಅಕ್ರಮವಾಗಿ 20 ನಲ್ಲಿಗಳ ಸಂಪರ್ಕ ಪಡೆಯಲಾಗಿತ್ತು. ಅದನ್ನು ತೆರವುಗೊಳಿಸಲಾಗಿದೆ. ಇದನ್ನೇ ಗುರಿಯಾಗಿಸಿಕೊಂಡಿರುವ ಕೆಲ ದುಷ್ಕರ್ಮಿಗಳು ನಿತ್ಯ ಪೈಪ್‍ಲೈನ್ ಒಡೆದುಹಾಕುತ್ತಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್‍ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತಿದೆ. ಮೂರುದಿನ ದಿನಗಳಲ್ಲಿ ಪೈಪ್‍ಲೈನ್ ಒಡೆದು ಹಾಕಿರುವವರ ಬಗ್ಗೆ ಸುಳಿವು ಸಿಕ್ಕ ನಂತರ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.