ADVERTISEMENT

ನಾಯಕನಹಟ್ಟಿ | ಅವೈಜ್ಞಾನಿಕ ಕಾಮಗಾರಿಯಿಂದಾಗಿ ನೀರು ಪೋಲು

ವಿ.ಧನಂಜಯ
Published 11 ನವೆಂಬರ್ 2023, 6:42 IST
Last Updated 11 ನವೆಂಬರ್ 2023, 6:42 IST
ನಾಯಕನಹಟ್ಟಿ ಪಟ್ಟಣದ ಮಾಳಪ್ಪನಹಟ್ಟಿ ಬಳಿ ₹ 1ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ
ನಾಯಕನಹಟ್ಟಿ ಪಟ್ಟಣದ ಮಾಳಪ್ಪನಹಟ್ಟಿ ಬಳಿ ₹ 1ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ   

ನಾಯಕನಹಟ್ಟಿ: ಮಾಳಪ್ಪನಹಟ್ಟಿ ಗ್ರಾಮದ ಸಮೀಪದ ದೊಡ್ಡಹಳ್ಳಕ್ಕೆ ನಿರ್ಮಿಸಿರುವ ಚೆಕ್‌ ಡ್ಯಾಂನ ಹಿಂಬದಿಯ ಮಣ್ಣಿನ ತಡೆಗೋಡೆ ಕುಸಿದ ಪರಿಣಾಮ ಸಂಗ್ರಹವಾಗಬೇಕಿದ್ದ ಅಪಾರ ಪ್ರಮಾಣದ ಮಳೆ ನೀರು ವ್ಯರ್ಥವಾಗಿ ಹಳ್ಳ ಸೇರಿದೆ.

ನಾಯಕನಹಟ್ಟಿ ಹೋಬಳಿಯು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಇಲ್ಲಿ ಬೀಳುವ ಹನಿ ನೀರೂ ಸ್ಥಳೀಯರಿಗೆ ಅಮೂಲ್ಯ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಚೆಕ್‌ ಡ್ಯಾಂ ನಿರ್ಮಿಸಿದೆ. ಆದರೆ, ಸಮರ್ಪಕ ನಿರ್ವಹಣೆ ಮತ್ತು ಉಸ್ತುವಾರಿ ಇಲ್ಲದಿರುವುದರಿಂದ ಚೆಕ್‌ ಡ್ಯಾಂನಲ್ಲಿ ನೀರು ಸಂಗ್ರಹಿಸಲು ನಿರ್ಮಿಸಿದ ಮಣ್ಣಿನ ದಿಣ್ಣೆ ಕುಸಿದು ನೀರು ಹಳ್ಳ ಸೇರಿ ಪೋಲಾಗುತ್ತಿದೆ.

ಪಟ್ಟಣದ ಪಕ್ಕದಲ್ಲಿ ಹರಿಯುವ ದೊಡ್ಡಹಳ್ಳಕ್ಕೆ ಅಡ್ಡಲಾಗಿ ಮಾಳಪ್ಪನಹಟ್ಟಿ ಬಳಿ 8 ತಿಂಗಳ ಹಿಂದೆ ₹ 1 ಕೋಟಿ ವೆಚ್ಚದಲ್ಲಿ ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಆದರೆ, ಮಂಗಳವಾರ ಮತ್ತು ಬುಧವಾರ ರಾತ್ರಿ ಸುರಿದ ಮಳೆಯಿಂದ ಚೆಕ್‌ ಡ್ಯಾಂ ಹಿಂಬದಿಯಲ್ಲಿ ಹಾಕಿದ್ದ ಮಣ್ಣಿನ ದಿಣ್ಣೆ ಕುಸಿದಿದೆ. ಅಪಾರ ಪ್ರಮಾಣದ ನೀರು ಹಳ್ಳ ಸೇರಿದೆ. ಭಾರಿ ಪ್ರಮಾದಲ್ಲಿ ಹಳ್ಳದ ನೀರು ಚೆಕ್‌ ಡ್ಯಾಂ ತಲುಪದೆ ಹಿಂಬದಿಯಿಂದ ಹಳ್ಳಕ್ಕೆ ಸೇರಿದೆ. ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಕಾಮಗಾರಿಯ ಗುಣಮಟ್ಟದ ಬಗ್ಗೆ ಈಗ ಪ್ರಶ್ನೆಗಳು ಉದ್ಭವಿಸಿವೆ.

ADVERTISEMENT

₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ ನೀರು ಹಿಡಿದಿಡುವಲ್ಲಿ ವಿಫಲವಾಗಿದೆ. ಇದರಲ್ಲಿ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತದೆ. ಅಧಿಕಾರಿಗಳು ಮೇಲ್ವಿಚಾರಣೆಯಲ್ಲಿ ವಿಫಲರಾಗಿದ್ದಾರೆ. ಇನ್ನಾದರೂ ವೈಜ್ಞಾನಿಕ ರೀತಿಯಲ್ಲಿ ಚೆಕ್‌ ಡ್ಯಾಂ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್. ರವಿಕುಮಾರ್ ಒತ್ತಾಯಿಸಿದ್ದಾರೆ.

ಗುತ್ತಿಗೆದಾರರಿಗೆ ಕಾಮಗಾರಿಯ ಪೂರ್ಣ ಮೊತ್ತ ಪಾವತಿಸಿಲ್ಲ. ಚೆಕ್‌ ಡ್ಯಾಂ ಗುಣಮಟ್ಟ ತಿಳಿಯುವ ಉದ್ದೇಶದಿಂದ ತಡೆ ಹಿಡಿಯಲಾಗಿದೆ. ಚೆಕ್‌ ಡ್ಯಾಂ ಸುತ್ತ ತೇವಾಂಶ ಇದೆ. ನೀರು ಕಡಿಮೆಯಾದ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ದರ್ಶನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಳಪ್ಪನಹಟ್ಟಿ ಬಳಿ ಚೆಕ್ಡ್ಯಾಂ ಹಿಂಬದಿಯ ಮಣ್ಣಿನ ತಡೆಗೋಡೆ ಕುಸಿದು ನೀರು ಹಳ್ಳ ಸೇರುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.