ADVERTISEMENT

ವಾರಾಂತ್ಯದ ಕರ್ಫ್ಯೂ: ಕೋಟೆನಾಡು ಚಿತ್ರದುರ್ಗ ಸ್ತಬ್ಧ

ನೀರವಮೌನಕ್ಕೆ ಶರಣಾದ ಮುಖ್ಯ ರಸ್ತೆಗಳು * ತರಕಾರಿ, ಹಾಲು, ಔಷಧಿ ಖರೀದಿಸಲು ಮಾತ್ರ ಕಂಡು ಬಂದ ಜನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 16:47 IST
Last Updated 24 ಏಪ್ರಿಲ್ 2021, 16:47 IST
ಚಿತ್ರದುರ್ಗದ ಬಿ.ಡಿ. ರಸ್ತೆಯಲ್ಲಿ ಜನಸಂಚಾರ ಇಲ್ಲದೆ ಬಿಕೊ ಎನ್ನುತ್ತಿರುವುದು
ಚಿತ್ರದುರ್ಗದ ಬಿ.ಡಿ. ರಸ್ತೆಯಲ್ಲಿ ಜನಸಂಚಾರ ಇಲ್ಲದೆ ಬಿಕೊ ಎನ್ನುತ್ತಿರುವುದು   

ಚಿತ್ರದುರ್ಗ: ವಾಹನ ದಟ್ಟಣೆಯಿಂದ ಸದ್ದು ಮಾಡುತ್ತಿದ್ದ ಮುಖ್ಯ ರಸ್ತೆಗಳಲ್ಲಿ ನೀರವಮೌನ. ಜನಸಂಚಾರವೇ ಇಲ್ಲದ ಮಾರ್ಗಗಳ ಉದ್ದಕ್ಕೂ ಬಾಗಿಲು ಮುಚ್ಚಿದ ಅಂಗಡಿಗಳು. ಸದಾ ಗಿಜಿಗುಡುತ್ತಿದ್ದ ಮಾರುಕಟ್ಟೆ ಗ್ರಾಹಕರಿಲ್ಲದೇ ಬಿಚಿತ್ರದುರ್ಗಕೋ ಎನ್ನುವ ವಾತಾವರಣ. ಬಸ್‌ ನಿಲ್ದಾಣ ಖಾಲಿ ಖಾಲಿ. ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಂಚರಿಸದ ವಾಹನಗಳು...

ಇವು ಚಿತ್ರದುರ್ಗ ನಗರ ಹಾಗೂ ಜಿಲ್ಲೆಯಾದ್ಯಂತ ಕಂಡ ದೃಶ್ಯಗಳು. ರಜೆ ದಿನಗಳಲ್ಲಿ ಜನಸಂಚಾರ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ವಾರಾಂತ್ಯದ ಕರ್ಫ್ಯೂ’ ಕಾರಣಕ್ಕೆ ಶನಿವಾರ ಲಾಕ್‌ಡೌನ್‌ ಮಾದರಿಯಂತೆ ಕೋಟೆನಾಡು ಸಂಪೂರ್ಣ ಸ್ತಬ್ಧವಾಗಿತ್ತು.

ದಿನಸಿ, ಹಾಲು, ಹಣ್ಣು, ತರಕಾರಿ, ಮಾಂಸದ ಅಂಗಡಿಗಳ ಸೇವೆಗೆ ಬೆಳಿಗ್ಗೆ 6ರಿಂದ 10ರ ವರೆಗೆ ಅವಕಾಶ ಇದ್ದಿದ್ದರಿಂದ ಬೆಳಿಗ್ಗೆ 9ರೊಳಗೆ ಜನ ಕೆಲ ವಸ್ತುಗಳನ್ನು ಖರೀದಿಸಿದರು. ಈ ವೇಳೆ ಒಂದಿಷ್ಟು ವಾಹನಗಳ ಸದ್ದು ಕೇಳಿಸಿತು. 9.30ರ ನಂತರ ಜನಸಂಚಾರ ಕಡಿಮೆಯಾಯಿತು.

ADVERTISEMENT

ಆಸ್ಪತ್ರೆ, ಆರೋಗ್ಯ ಕೇಂದ್ರ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರ ವರೆಗಿನ 57 ಗಂಟೆಗಳ ಕರ್ಫ್ಯೂನ ಮೊದಲ ದಿನ ಜನ ಬೆಂಬಲಿಸುವ ಮೂಲಕ ಮನೆಯಲ್ಲಿಯೇ ಉಳಿದರು.

ಬಿಕೋ ಎನ್ನುತ್ತಿದ್ದ ರಸ್ತೆ ಮಾರ್ಗಗಳು: ಸದಾ ಜನದಟ್ಟಣೆ ಮತ್ತು ವಾಹನ ಸಂಚಾರದಿಂದ ಕೂಡಿರುತ್ತಿದ್ದ ಮುಖ್ಯ ರಸ್ತೆ ಮಾರ್ಗಗಳೆಲ್ಲವೂ ಬಿಕೋ ಎನ್ನುತ್ತಿದ್ದವು. ಬಿ.ಡಿ. ರಸ್ತೆ, ಮೆದೇಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆ, ಸಂತೆ ಹೊಂಡದ ರಸ್ತೆ, ಜೆಸಿಆರ್‌ ಮುಖ್ಯ ರಸ್ತೆ, ಜಿಲ್ಲಾಧಿಕಾರಿ ವೃತ್ತ, ಕನಕ ವೃತ್ತ, ತುರುವನೂರು ರಸ್ತೆ, ದಾವಣಗೆರೆ ರಸ್ತೆಯಲ್ಲಿ ಜನಸಂಚಾರವೇ ಕಾಣಲಿಲ್ಲ. ನಗರದ ರಸ್ತೆಗಳು ನೀರವ ಮೌನಕ್ಕೆ ಶರಣಾದಂತೆ ಭಾಸವಾಯಿತು.

ನಗರದ ಬಹುತೇಕ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಯಾರೂ ಅಂಗಡಿ ತೆರೆಯುವ ಪ್ರಯತ್ನ ಮಾಡಲಿಲ್ಲ. ತರಕಾರಿ ಮಾರುಕಟ್ಟೆಗಳ ಬಳಿ ಬೆಳಿಗ್ಗೆ 9ರ ವರೆಗೂ ಒಂದಿಷ್ಟು ವ್ಯಾಪಾರ ಚಟುವಟಿಕೆ ನಡೆಯಿತು. ಜೋಗಿಮಟ್ಟಿ ರಸ್ತೆ, ಫಿಲ್ಟರ್‌ ಹೌಸ್ ರಸ್ತೆ, ಕೆಳಗೋಟೆ, ಮುನ್ಸಿಪಲ್ ಕಾಲೊನಿ ಸೇರಿ ಕೆಲ ಬಡಾವಣೆಗಳಲ್ಲಿ ದಿನಸಿ ಮಳಿಗೆಗಳು ಮಾತ್ರ ತೆರೆದಿದ್ದವು. ಉಳಿದಂತೆ ಇಡೀ ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಸಂಚಾರ ಸಂಪೂರ್ಣ ಸ್ಥಗಿತ: ‘ಕರ್ಫ್ಯೂ’ ಅಂಗವಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆಟೊ, ಟ್ಯಾಕ್ಸಿ, ಲಾರಿ ಸೇರಿ ಸರಕು ಸಾಗಣೆ ವಾಹನ ಕೂಡ ರಸ್ತೆಗೆ ಇಳಿಯಲಿಲ್ಲ. ಅಲ್ಲಲ್ಲಿ ದ್ವಿಚಕ್ರ ವಾಹನ, ಕಾರುಗಳು ಮಾತ್ರ ಕಂಡು ಬರುತ್ತಿದ್ದವು. ಕುತೂಹಲಕ್ಕೆ ಕೆಲವರು ವಾಹನದಲ್ಲಿ ಸುತ್ತಾಡಿ ಪರಿಸ್ಥಿತಿ ಅವಲೋಕಿಸಿದರು.

ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು: ಜನಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಜಿಲ್ಲೆಯ ಬಹುತೇಕ ಭಾಗಗಳಲ್ಲಿರುವ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಹಾಲು ಮಾರಾಟಕ್ಕೆ ಅವಕಾಶ ಇದ್ದಿದ್ದರಿಂದ ಕೆಲ ನಂದಿನಿ ಪಾರ್ಲರ್‌ಗಳು ಮಾತ್ರ ತೆರೆದಿದ್ದವು. ಆದರೆ, ಅನೇಕರು ಬೆಳಿಗ್ಗೆಯೇ ಪಾರ್ಲರ್‌ಗೆ ಧಾವಿಸಿ ಹಾಲು ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.