ಹಿರಿಯೂರು: ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಸಂಜೆ 5.30ರ ವೇಳೆಗೆ ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮಕ್ಕೆ ಪ್ರವೇಶಿಸಿತು.
ನೂರಾರು ಮಹಿಳೆಯರು ಹಣೆಯಲ್ಲಿ ಭಂಡಾರ ಧರಿಸಿ, ಕೈಯಲ್ಲಿ ಪೂರ್ಣಕುಂಭ ಹಿಡಿದು ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ, ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಸೋಮಲಿಂಗೇಶ್ವರ ಸ್ವಾಮೀಜಿ, ಮೈಲಾರದ ಗೊರವಯ್ಯ ರಾಮಪ್ಪ, ಮುತ್ತೇಶ್ವರಸ್ವಾಮೀಜಿ, ಮಾದಯ್ಯ ಸ್ವಾಮೀಜಿ, ಶರಭಯ್ಯ ಸ್ವಾಮೀಜಿ, ಸಂಗಯ್ಯ ಗುರುವಿನವರು, ರೇವಯ್ಯ ಒಡೆಯರ್, ಮಾಳಿಂಗರಾಯ ಒಡೆಯರ್, ಓಂಕಾರ ಒಡೆಯರ್ ಅವರನ್ನು ಭಕ್ತಿಯಿಂದ ಬರಮಾಡಿಕೊಂಡರು.
ಬುರುಜನರೊಪ್ಪ ಗಣಪತಿ ದೇವಸ್ಥಾನದ ಸಮೀಪ ಸಹಸ್ರಾರು ಭಕ್ತರೊಂದಿಗೆ ಸ್ವಾಮೀಜಿಗಳು ಬರುತ್ತಿದ್ದಂತೆಯೇ ಜನರ ಘೋಷಣೆ ಮುಗಿಲುಮುಟ್ಟಿತು. ‘ಎಸ್‌ಟಿ ಹೋರಾಟಕ್ಕೆ ಜಯವಾಗಲಿ’, ‘ಕುರುಬರ ನ್ಯಾಯಯುತ ಹಕ್ಕು ಜಾರಿಗೆ ಬರಲಿ’ ಎಂದು ಘೋಷಣೆ ಮೊಳಗಿಸಿದರು.
ಸಂಜೆ 7ಕ್ಕೆ ಪಾದಯಾತ್ರೆ ಐಮಂಗಲ ಗ್ರಾಮ ತಲುಪಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಹಾಂತೇಶ್, ಕಂದಿಕೆರೆ ಸುರೇಶ್ ಬಾಬು, ಕಾಂತರಾಜ್ ಹುಲಿ, ಎಸ್. ಗಿರಿಜಪ್ಪ, ಬಿ.ಟಿ. ಜಗದೀಶ್, ಕುಮಾರಗೌಡ, ಜೈರಾಂ ಪಾದಯಾತ್ರೆಯನ್ನು ಬರಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.