ADVERTISEMENT

ಕುರುಬ ಹೋರಾಟವನ್ನು ಆರ್‌ಎಸ್‌ಎಸ್‌ ಬೆಂಬಲಿಸಿದರೆ ತಪ್ಪೇನು: ವಿಶ್ವನಾಥ್

ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 15:44 IST
Last Updated 23 ಜನವರಿ 2021, 15:44 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌    

ಚಿತ್ರದುರ್ಗ: ಪರಿಶಿಷ್ಟ ಪಂಗಡದ ಸೌಲಭ್ಯಕ್ಕೆ ಒತ್ತಾಯಿಸಿ ಕುರುಬ ಸಮುದಾಯ ನಡೆಸುತ್ತಿರುವ ಹೋರಾಟವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಬೆಂಬಲಿಸಿದರೆ ತಪ್ಪೇನು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಪ್ರಶ್ನಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾದಯಾತ್ರೆ ಆರ್‌ಎಸ್‌ಎಸ್‌ ಪ್ರಾಯೋಜಿತ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದರು.

‘ಕಾಗಿನೆಲೆ ಗುರುಪೀಠದ ಮೊದಲ ಪೀಠಾಧಿಪತಿ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ ಸಂಘದ ಹಿನ್ನೆಲೆ ಹೊಂದಿದ್ದರು. ಹಿಂದೂ ಧರ್ಮವನ್ನು ಪ್ರತಿಪಾದನೆ ಮಾಡುವ ಆರ್‌ಎಸ್‌ಎಸ್‌ ಗುಮ್ಮವಲ್ಲ. ಅದು ನಿಷೇಧಿತ ಸಂಸ್ಥೆಯಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

‘ಕುರುಬ ಸಮುದಾಯಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಈಗ ಹುಟ್ಟಿರುವುದಲ್ಲ. ಹಲವು ದಶಕಗಳಿಂದಲೂ ಸರ್ಕಾರಕ್ಕೆ ಈ ಬೇಡಿಕೆ ಸಲ್ಲಿಸುತ್ತಿದ್ದೇವೆ. ಹಿಂದೊಮ್ಮೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದರೂ ಪ್ರಯೋಜನವಾಗಿಲ್ಲ. ಸೌಲಭ್ಯ ಪಡೆಯುವ ಉದ್ದೇಶದಿಂದ ನಿರಂಜನಾನಂದಪುರಿ ಸ್ವಾಮೀಜಿ ಸಾರಥ್ಯದಲ್ಲಿ ಹೋರಾಟ ಆರಂಭಿಸಲಾಗಿದೆ’ ಎಂದು ಹೇಳಿದರು.

‘ಕುರಿ ಸಾಕಾಣಿಕೆಯನ್ನು ಮೂಲ ಕಸುಬನ್ನಾಗಿ ಹೊಂದಿರುವ ಸಮುದಾಯ ತೀರಾ ಹಿಂದುಳಿದಿದೆ. ಕುರಿಗಳ ಜೊತೆಗೆ ಅಲೆದು ಬದುಕು ಕಟ್ಟಿಕೊಂಡ ಕುರುಬರ ಕುಲಶಾಸ್ತ್ರೀಯ ಅಧ್ಯಯನ ನಡೆಸುವ ಅಗತ್ಯವಿದೆ. ಸರಿಯಾದ ಮೀಸಲಾತಿ ಸೌಲಭ್ಯ ದೊರಕಿದರೆ ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.