ಸಿದ್ದರಾಮಯ್ಯ
ಚಿತ್ರದುರ್ಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣ ಕುರಿತು ಎಸ್‌ಐಟಿ ತನಿಖೆ ನಡೆಯುವ ಸಂದರ್ಭದಲ್ಲಿಯೇ ಇ.ಡಿ ಓಡೋಡಿ ಬಂದಿದ್ದು ಏಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಪ್ರಶ್ನಿಸಿದರು.
‘ಬಿಜೆಪಿಯವರು ನಡೆಸಿರುವ ಕೆಲವು ಹಗರಣಗಳ ತನಿಖೆಯೂ ನಡೆಯುತ್ತಿದೆ. ಅವರ ವಿರುದ್ಧ ಆರೋಪ ಬಂದಾಗ ಯಾವ ಇ.ಡಿ.ಯೂ ಬರಲಿಲ್ಲ. ಅವರು ಕೊಳ್ಳೆ ಹೊಡೆದದ್ದು ಜನರ ಹಣ ಅಲ್ಲವೇ? ಬಿಜೆಪಿಯ ಅವ್ಯವಹಾರಗಳನ್ನು ಸದನದ ಮುಂದಿಟ್ಟಿದ್ದೇನೆ. ಈ ವಿಚಾರದಲ್ಲಿ ನಾವು ಯಾರನ್ನೂ ಬೆದರಿಸುವ ಕೆಲಸ ಮಾಡುತ್ತಿಲ್ಲ’ ಎಂದು ಸುದ್ದಿಗಾರರಿಗೆ ಹೇಳಿದರು.
‘ಡಿ.ಎಸ್.ವೀರಯ್ಯ, ಶಂಕರಪ್ಪ ಜೈಲಿಗೆ ಹೋಗಿದ್ದಾರೆ. ಅದನ್ನು ಬಿಜೆಪಿಯವರು ಪ್ರಸ್ತಾಪ ಮಾಡುತ್ತಿಲ್ಲ. ಭೋವಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆಸಿ ಜೈಲಿಗೆ ಹೋದವರು ಯಾರು? ನಮ್ಮ ವಿರುದ್ಧ ಮಾತ್ರ ಟೀಕೆ ಮಾಡುತ್ತಾರೆ. ಅವರು ಮಾಡಿದ ಅಕ್ರಮಗಳನ್ನು ಮುಚ್ಚಿಕೊಳ್ಳುತ್ತಾರೆ’ ಎಂದು ಆರೋಪಿಸಿದರು.
‘ಬಿಜೆಪಿ ಅಕ್ರಮಗಳ ಬಗ್ಗೆ ನಾನು ಪ್ರಸ್ತಾಪಿಸಿದಾಗ ಬಿಜೆಪಿ ಸದಸ್ಯರಿಂದ ಯಾವುದೇ ಉತ್ತರ ಬರಲಿಲ್ಲ. ನಾವು ಆರೋಪಗಳ ಸತ್ಯಾಸತ್ಯತೆ ಅರಿಯಲು ತನಿಖೆ ನಡೆಸುತ್ತಿದ್ದೇವೆ. ಬಿಜೆಪಿ ಮುಖಂಡರು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುವರೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.