ADVERTISEMENT

ಚಿತ್ರದುರ್ಗ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧೆ ಖಚಿತ: ರಘು ಆಚಾರ್

ಶಾಲಾ ಅಭಿವೃದ್ಧಿಗೆ ₹ 10 ಲಕ್ಷ ದೇಣಿಗೆ ಭರವಸೆ ನೀಡಿದ ರಘು ಆಚಾರ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 2:53 IST
Last Updated 7 ಫೆಬ್ರುವರಿ 2023, 2:53 IST
ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಸೋಮವಾರ ವಿಧಾನ ಪರಿಷತ್ ಮಾಜಿ ಸದಸ್ಯ ರಘುಆಚಾರ್ ಭೇಟಿ ನೀಡಿದರು.
ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಸೋಮವಾರ ವಿಧಾನ ಪರಿಷತ್ ಮಾಜಿ ಸದಸ್ಯ ರಘುಆಚಾರ್ ಭೇಟಿ ನೀಡಿದರು.   

ನಾಯಕನಹಟ್ಟಿ: ಎರಡು ಬಾರಿ ಚಿತ್ರದುರ್ಗ ಜಿಲ್ಲೆ ಸ್ಥಳೀಯ ಜನಪ್ರತಿನಿಧಿಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವುದು ಖಚಿತ ಎಂದು ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್ ತಿಳಿಸಿದರು.

ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಚಿತ್ರದುರ್ಗ ಜಿಲ್ಲೆಯಿಂದ ಎರಡು ಬಾರಿ ಪರಿಷತ್ ಸದಸ್ಯನಾಗಿ ರಾಜಕೀಯವನ್ನು ಆರಂಭಿಸಿ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಖಚಿತಪಡಿಸಿದ್ದೇನೆ. ಪಕ್ಷವು ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ. ಪರಿಷತ್ ಸದಸ್ಯನಾಗಿದ್ದಾಗ ಸಾಕಷ್ಟು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಿದ್ದೇನೆ. ಪರಿಷತ್ತಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಸೂದೆ ಮಂಡಿಸಿದ್ದೇನೆ. ಚಿತ್ರದುರ್ಗದಲ್ಲಿ ಭಾರತ್ ಜೋಡೊ ಯಾತ್ರೆ ಜರುಗಿದ ಸಂದರ್ಭದಲ್ಲಿ ನನಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ನನಗೆ ಸೂಕ್ತ ವೈದ್ಯಕೀಯ ನೆರವು ದೊರೆಯಲಿಲ್ಲ. ನಂತರ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದೆ. ಜಿಲ್ಲೆಯ ಆರೋಗ್ಯ ವ್ಯವಸ್ಥೆ ಉತ್ತಮವಾಗಿಲ್ಲ ಎಂದು ನನಗೆ ಅರ್ಥವಾಗಿದೆ. ಆದ್ದರಿಂದ ಕ್ಯಾದಿಗೆರೆ ಬಳಿಯಲ್ಲಿ 17 ಎಕರೆ ಪ್ರದೇಶದಲ್ಲಿ ₹ 370 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಚನೆ ಹೊಂದಿದ್ದೇನೆ. ಇದರಿಂದ ಜಿಲ್ಲೆಯ ಜನರಿಗೆ ಸಹಾಯವಾಗಲಿದೆ’ ಎಂದರು.

ADVERTISEMENT

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಮುಖ್ಯಶಿಕ್ಷಕರು ಮತ್ತು ಗ್ರಾಮಸ್ಥರ ಜತೆಗೆ ಶಾಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ನಂತರ ಶಾಲೆಗೆ ₹ 10 ಲಕ್ಷ ವೈಯುಕ್ತಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಪಿ. ನಾಗೇಶ್‌ ರೆಡ್ಡಿ, ಎನ್‌ಎಸ್‌ಯುಐ ಕಾರ್ಯದರ್ಶಿ ಮಮತ ನೇರ್ಲಿಗಿ ಸೇರಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.