
ಚಿತ್ರದುರ್ಗ: ‘ಋತುಚಕ್ರ ರಜೆ ಮಂಜೂರು ಮಾಡಿದ ರಾಜ್ಯ ಸರ್ಕಾರ ಮಹಿಳಾ ಅಧಿಕಾರಿಗಳ ವಾಹನಕ್ಕೆ ಮಹಿಳಾ ಚಾಲಕರನ್ನು ನೇಮಿಸಬೇಕು. ಜತೆಗೆ ನೌಕರರ ಸುರಕ್ಷತೆಗಾಗಿ ಪ್ರತ್ಯೇಕ ಕಾನೂನು ರಚಿಸಬೇಕು’ ಎಂದು ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ರೋಶಿನಿ ಗೌಡ ಒತ್ತಾಯಿಸಿದರು.
‘2023ರಲ್ಲಿ ಸ್ಥಾಪಿಸಿದ ಸಂಘಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದ ಆವರಣದಲ್ಲಿ ಸರ್ಕಾರದಿಂದ ಕಚೇರಿ ಸಿಕ್ಕಿದೆ. ಇಡೀ ರಾಜ್ಯದಾದ್ಯಂತ ಸಂಚರಿಸಿ, ಮಹಿಳಾ ನೌಕರರ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸರ್ಕಾರಿ ಮಹಿಳಾ ನೌಕರರ ಸರ್ವಾಂಗೀಣ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಸಂಘವು ನಿರಂತರವಾಗಿ ಶ್ರಮಿಸುತ್ತಿದೆ. ಈಗಾಗಲೇ ಸಂಘದಲ್ಲಿ 50 ಸಾವಿರ ಸದಸ್ಯರಿದ್ದಾರೆ. ಮಹಿಳಾ ನೌಕರರಿಗೆ ಋತುಚಕ್ರ ರಜೆ ಮಂಜೂರಾಗುವಂತೆ ಸಚಿವ ಸಂಪುಟದ ಅನುಮೋದನೆ ದೊರಕುವಲ್ಲಿ ನಮ್ಮ ಸಂಘವು ಸಕ್ರಿಯ ಪಾತ್ರವಹಿಸಿದೆ. ಇನ್ನೂ ಹಲವು ಬೇಡಿಕೆಗಳು ಸರ್ಕಾರದ ಮುಂದಿದ್ದು, ಅವುಗಳನ್ನು ಶೀಘ್ರ ಈಡೇರುವ ನಿರೀಕ್ಷೆಯಿದೆ’ ಎಂದು ಹೇಳಿದರು.
‘ಗರ್ಭಿಣಿ ನೌಕರರು ವೈದ್ಯಕೀಯ ಪರೀಕ್ಷೆಗೆ ಪ್ರತಿ ತಿಂಗಳು ರಜೆ ಹಾಕುವ ಪರಿಸ್ಥಿತಿ ಇದೆ. ಆದ್ದರಿಂದ ಗರ್ಭಿಣಿ ನೌಕರರ ವೈದ್ಯಕೀಯ ಪರೀಕ್ಷೆಗೆ ಮಾಸಿಕ ಒಂದು ದಿನ ವೇತನ ಸಹಿತ ರಜೆಯ ಅಗತ್ಯವಿದೆ. ಮಾತೃತ್ವ ರಜೆಯನ್ನು ಕೂಡ ಒಂದು ವರ್ಷದ ವರೆಗೆ ವಿಸ್ತರಿಸುವುದು ಸೂಕ್ತ’ ಎಂದು ತಿಳಿಸಿದರು.
‘ರಾಜ್ಯದ ಸರ್ಕಾರಿ ನೌಕರರ ಪೈಕಿ ಶೇ 52ರಷ್ಟು ಮಹಿಳಾ ನೌಕರರಿದ್ದೇವೆ. ನೌಕರರನ್ನು ಒಗ್ಗೂಡಿಸುವ, ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಸಂಘ ಅಸ್ತಿತ್ವಕ್ಕೆ ಬಂದಿದೆ. ಕುಟುಂಬ, ಕಚೇರಿಯ ಒತ್ತಡ ನಿರ್ವಹಣೆಯಲ್ಲಿ ಮಹಿಳೆಯರಿಗೆ ವಿಶೇಷ ಕೌಶಲಗಳ ಅಗತ್ಯವಿದೆ. ಈ ಕುರಿತು ಸಂವಾದಗಳನ್ನು ಏರ್ಪಡಿಸಲಾಗುತ್ತಿದೆ’ ಎಂದರು.
‘ಸರ್ಕಾರಿ ನೌಕರರ ಏಳಿಗೆಗಾಗಿ ಕೆಲಸ ಮಾಡಿದ ಮೇರಿ ದೇವಾಸಿಯಾ ಅವರ ಜನ್ಮದಿನವಾದ ಸೆ.13ರಂದು ಸರ್ಕಾರಿ ಮಹಿಳಾ ನೌಕರರ ದಿನಾಚರಣೆ ಮಾಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗಿತ್ತು. ಇದಕ್ಕೆ ಅವರು ಒಪ್ಪಿಗೆ ನೀಡಿದ್ದು, ಈ ವರ್ಷದಿಂದಲೇ ದಿನಾಚರಣೆ ಕಾರ್ಯಕ್ರಮ ಆರಂಭಿಸುವ ಬಗ್ಗೆ ಸದ್ಯದಲ್ಲೇ ಸುತ್ತೋಲೆ ಹೊರಬೀಳಲಿದೆ’ ಎಂದು ಹೇಳಿದರು.
ರಾಜ್ಯ ಘಟಕದ ಖಜಾಂಚಿ ವೀಣಾ ಕೃಷ್ಣಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಸುಷ್ಮರಾಣಿ, ಸಂಘಟನಾ ಕಾರ್ಯದರ್ಶಿಗಳಾದ ಮಂಜುಳ, ಲಲಿತಮ್ಮ, ಎಂ.ಆಶಾರಾಣಿ, ವಿಜಯಲಕ್ಷ್ಮಿ, ಕರಿಯಮ್ಮ ಇದ್ದರು.
ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರೇ ಸ್ಥಾಪಿಸಿರುವ ಈ ಮಹಿಳಾ ನೌಕರರ ಸಂಘವನ್ನು ಬಲವರ್ಧನೆಗೊಳಿಸುವ ಪ್ರಯತ್ನಗಳು ನಡೆದಿವೆ. ಸಂಘ ಮಹಿಳೆ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲಲಿದೆ.ರೋಶಿನಿ ಗೌಡ ಅಧ್ಯಕ್ಷೆ ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.