ADVERTISEMENT

ಮಂಚದ ಅಡಿ ಪತ್ನಿಯ ಶವ: ಪತಿಯ ಮೇಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 2:17 IST
Last Updated 8 ಜನವರಿ 2022, 2:17 IST
ಆರ್. ನಾರಪ್ಪ ಮತ್ತು ಪತ್ನಿ ಸುಮಾ
ಆರ್. ನಾರಪ್ಪ ಮತ್ತು ಪತ್ನಿ ಸುಮಾ   

ಸಿರಿಗೆರೆ: ಕೋಣನೂರು ಗ್ರಾಮದಲ್ಲಿ ನಾಪತ್ತೆಯಾಗಿದ್ದ ಆರ್. ನಾರಪ್ಪನ ಪತ್ನಿ ಸುಮಾ (26) ಅವರ ಶವ ಮನೆಯ ಹಾಲ್‌ನಲ್ಲಿಯ ಕಬ್ಬಿಣದ ಮಂಚದ ಕೆಳಗೆ ಹೂತಿಟ್ಟ ಸ್ಥತಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ. ಪತಿ ನಾರಪ್ಪನೇ ಕೊಂದಿರುವುದಾಗಿ ಸಂಶಯ ವ್ಯಕ್ತವಾಗಿದೆ.

ಪ್ರಕರಣದ ವಿವರ: ಕೋಣನೂರು ಗ್ರಾಮದ ರಾಜಪ್ಪ ಎಂಬುವರ ಮಗ ಆರ್. ನಾರಪ್ಪ ಹಾಗೂ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಬೆಣ್ಣೆಹಳ್ಳಿ ಗ್ರಾಮದ ಸುಮಾ ಅವರ ವಿವಾಹ 6 ವರ್ಷಗಳ ಹಿಂದೆ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ನಡೆದಿತ್ತು. ನಂತರ ದಂಪತಿಗೆ ಗಂಡು ಮಗುವಾಗಿತ್ತು. ಆ ಮಗುವಿಗೆ ಈಗ 5 ವರ್ಷ
ತುಂಬಿದೆ.

ಡಿ. 26ರಂದು ಆರ್. ನಾರಪ್ಪ ಪತ್ನಿಯ ತವರು ಮನೆಗೆ ಹೋಗಿ ಮಗ ನಾರದಮುನಿಯನ್ನು ಬಿಟ್ಟು ಬಂದಿದ್ದ. 27ರಂದು ಮರಳಿ ಕರೆದುಕೊಂಡು ಬಂದಿದ್ದ. ಈ ವೇಳೆ ಜೊತೆಯಲ್ಲಿ ಪತ್ನಿ ಇರಲಿಲ್ಲ. ಡಿ. 28ರಂದು ನಾರಪ್ಪ ತನ್ನ ಮಾವ ಕರಿಯಪ್ಪನಿಗೆ ದೂರವಾಣಿ ಕರೆ ಮಾಡಿ, ‘ಸುಮಾ ಡಿ. 25ರಂದು ರಾತ್ರಿಯಿಂದ ಕಾಣೆಯಾಗಿದ್ದಾಳೆ. ಎಲ್ಲ ಕಡೆ ಹುಡುಕುತ್ತಿದ್ದೇವೆ’ ಎಂದು ತಿಳಿಸಿದ. ತಕ್ಷಣ ಮಾವ ಕರಿಯಪ್ಪ ಕೋಣನೂರಿಗೆ ಬಂದು ಅಳಿಯನೊಂದಿಗೆ ಭರಮಸಾಗರ ಠಾಣೆಗೆ ಹೋಗಿ ಮಗಳು ಸುಮಾ ಕಾಣೆಯಾಗಿರುವ ಬಗ್ಗೆ ದೂರು ನೀಡಿದರು.

ADVERTISEMENT

ಒಂದು ವಾರವಾದರೂ ಸುಮಾಳ ಬಗ್ಗೆ ಸುಳಿವು ಸಿಗಲಿಲ್ಲ. ಡಿ. 25ರಂದೇ ಮಗಳು ಕಾಣೆಯಾಗಿದ್ದರೂ ಯಾರಿಗೂ ವಿಷಯ ತಿಳಿಸದ ಅಳಿಯನ ಬಗ್ಗೆ ಮಾವ ಕರಿಯಪ್ಪ ಅವರಿಗೆ ಅನುಮಾನ ಮೂಡಿತು. ಜ. 6ರಂದು ದೂರವಾಣಿ ಕರೆ ಮಾಡಿದಾಗ ಅಳಿಯನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ನೇರವಾಗಿ ಕರಿಯಪ್ಪ ಕೋಣನೂರಿಗೆ ಬಂದರು. ಮನೆಯಲ್ಲಿ ಅಳಿಯ ಇರಲಿಲ್ಲ. ಬಾಗಿಲು ತೆಗೆದು ಮನೆಯ ಒಳಗೆ ಹೋದರು. ಮನೆಯ ಹಾಲ್‌ನಲ್ಲಿ ಕಬ್ಬಿಣದ ಮಂಚದ ಬಳಿ ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದರು. ಮಂಚದ ಕೆಳಗೆ ಮೂಲೆಯಲ್ಲಿ ಕಡಪದ ಕಲ್ಲು ಸ್ವಲ್ಪ ತೆರೆದಿರುವುದು ಹಾಗೂ ಸಮೀಪದಲ್ಲಿಯೇ ಸಿಮೆಂಟ್‌ ಕಾಂಕ್ರೀಟ್ ಇರುವುದನ್ನು ಕಂಡು ಸಂಶಯ ಮೂಡಿತು. ತಕ್ಷಣ ಅವರು ತಮ್ಮ ಸಂಬಂಧಿಕರಿಗೆ, ಪೊಲೀಸರಿಗೆ ವಿಷಯ ತಿಳಿಸಿದರು.

ಸ್ಥಳದಲ್ಲಿ ಪೊಲೀಸರು ಪರಿಶೀಲಿಸಿದಾಗ ಅನುಮಾನ ನಿಜವಾಗಿತ್ತು. ಸುಮಾ ಅವರನನ್ನು ಕೊಲೆ ಮಾಡಿ ಕಡಪ ಕಲ್ಲಿನ ಕೆಳಗೆ ಹೂತಿಡಲಾಗಿತ್ತು. ಮೇಲೆ ಗೊತ್ತಾಗದಂತೆ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿತ್ತು.

‘ವರದಕ್ಷಿಣೆಯ ಕಾರಣ ನಿತ್ಯ ಮನೆಯಲ್ಲಿ ಜಗಳವಾಗುತ್ತಿತ್ತು. ಆರೋಪಿ ಅದಕ್ಕಾಗಿಯೇ ಕಿರುಕುಳ ನೀಡಿ ಈ ರೀತಿ ಹತ್ಯೆಗೈದಿದ್ದಾನೆ. ಕೋಣನೂರಿನಲ್ಲಿ ಪರಿಚಯ ಇರುವ ಸ್ನೇಹಿತರನ್ನು ಕೇಳಿದಾಗ ಪ್ರತಿ ದಿನ ಕುಡಿದು ಬಂದು ಮಗಳಿಗೆ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದ ಎಂದು ಕೊಲೆಯಾದ ನಂತರವೇ ನನಗೆ ಗೊತ್ತಾಯಿತು. ನನ್ನ ಮಗಳು ನನ್ನ ಬಳಿ ಈ ವಿಚಾರ ಹೇಳಿಕೊಂಡಿರಲಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯ ಪತ್ತೆಗೆ ಭರಮಸಾಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.