ADVERTISEMENT

ಚಿತ್ರದುರ್ಗ: ಮೂರನೇ ಅಲೆ ತಡೆಯಲು ಕೈಜೋಡಿಸಿ

ವಾರಿಯರ್‌ಗಳ ಅಭಿನಂದನಾ ಸಮಾರಂಭದಲ್ಲಿ ಎಸ್ಪಿ ಜಿ.ರಾಧಿಕಾ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:32 IST
Last Updated 26 ಜುಲೈ 2021, 3:32 IST
ಚಿತ್ರದುರ್ಗದಲ್ಲಿ ಭಾನುವಾರ ಪರಿವರ್ತನಾ ಫೌಂಡೇಷನ್‌ನಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಟ್ರಸ್ಟ್‌ನ ಅಧ್ಯಕ್ಷ ಕಾರ್ತಿಕ್ ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಪರಿವರ್ತನಾ ಫೌಂಡೇಷನ್‌ನಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಟ್ರಸ್ಟ್‌ನ ಅಧ್ಯಕ್ಷ ಕಾರ್ತಿಕ್ ಇದ್ದರು.   

ಚಿತ್ರದುರ್ಗ: ‘ಕೋವಿಡ್ ಮೂರನೇ ಅಲೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದನ್ನು ತಡೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮನವಿ ಮಾಡಿದರು.

ರೋಟರಿ ಬಾಲಭವನದಲ್ಲಿ ಪರಿವರ್ತನಾ ಫೌಂಡೇಷನ್‌ನಿಂದ ಭಾನುವಾರ ಕೊರೊನಾ ವಾರಿಯರ್‌ಗಳಿಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್ ಎರಡನೇ ಅಲೆ ವೇಳೆ ಅನೇಕ ಸಂಘ–ಸಂಸ್ಥೆಗಳು ನೆರವು ನೀಡುವ ಮೂಲಕ ಕೈಜೋಡಿಸಿವೆ. ಆಹಾರ ಸಿಗದವರಿಗೆ ಪೂರೈಸುವ ಕೆಲಸ ಮಾಡಿವೆ. ಈ ನಿಟ್ಟಿನಲ್ಲಿ ಪರಿವರ್ತನಾ ಫೌಂಡೇಷನ್‌ ಟ್ರಸ್ಟ್‌ ಕೂಡ ಶ್ರಮಿಸಿದೆ. ಇದು ನಿಜಕ್ಕೂ ಸಮಾಜಮುಖಿ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ‘ಕೋವಿಡ್ ವೇಳೆ ಆರೋಗ್ಯ ಇಲಾಖೆ ಜತೆಗೆ ವಿವಿಧ ಸಂಘ–ಸಂಸ್ಥೆಗಳು, ಸ್ವಯಂ ಸೇವಕರು, ಕೊರೊನಾ ವಾರಿಯರ್‌ಗಳು ಸೇರಿ ಅನೇಕರು ಕೈಜೋಡಿಸಿದ್ದಾರೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಿದರೆ, ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಯಲು ಸಾಧ್ಯವಿದೆ’ಎಂದು ಹೇಳಿದರು.

ಕೋವಿಡ್‌ ನಂತರ ರಕ್ತದ ಅಗತ್ಯ ತುಂಬಾ ಇದೆ. ಆದ್ದರಿಂದ ಟ್ರಸ್ಟ್‌, ಸಂಘ–ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಕೋವಿಡ್‌ ಮಾರ್ಗಸೂಚಿ ಪ್ರಕಾರ ಶಿಬಿರ ನಡೆಸುವ ಮೂಲಕ ರಕ್ತದ ಕೊರತೆ ಉಂಟಾಗದಂತೆ ರಕ್ತದಾನಕ್ಕೆ ಮುಂದಾಗಲು ಜನರನ್ನು ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದರಿನಾಥ್, ಟ್ರಸ್ಟ್ ಅಧ್ಯಕ್ಷ ಎಂ.ಕಾರ್ತಿಕ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್. ಕಾಶಿ ವಿಶ್ವನಾಥ ಶೆಟ್ಟಿ, ಆಶಾಕಿರಣ ಟ್ರಸ್ಟ್‌ ಅಧ್ಯಕ್ಷ ಕೆ.ಮಧುಪ್ರಸಾದ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಆಡಳಿತ ಮಂಡಳಿ ಸದಸ್ಯೆ ಗಾಯತ್ರಿ ಶಿವರಾಂ, ಟ್ರಸ್ಟ್‌ನ ಟ್ರಸ್ಟಿ ಶ್ರೀನಿವಾಸ್, ಕಾರ್ಯದರ್ಶಿ ಸಿ.ಹರೀಶ, ಜಿ.ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.