ಚಿತ್ರದುರ್ಗ: ‘ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಅಂಗವಿಕಲರ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯವನ್ನು ಪ್ರಸಕ್ತ ವರ್ಷದಲ್ಲೇ ಕೈಗೊಳ್ಳಲಾಗುವುದು’ ಎಂದು ಅಂಗವಿಕಲರ ಹಕ್ಕು ಅಧಿನಿಯಮ ಅನುಷ್ಠಾನದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ತಿಳಿಸಿದರು.
ಇಲ್ಲಿನ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಒಂಭತ್ತು ತಿಂಗಳ ಹಿಂದೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಅಂಗವಿಕಲರ ಸಬಲೀಕರಣ, ಸುಧಾರಣೆಗೆ ಗಣತಿಯಿಂದ ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದರು.
‘ಮುಖ್ಯಮಂತ್ರಿ ಈ ಬಾರಿಯ ಬಜೆಟ್‌ನಲ್ಲಿ ಸಹ ಅಂಗವಿಕಲರ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಜನಗಣತಿ ಕಾರ್ಯ ಸಂಬಂಧ ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂಗಳಿಗೆ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.
‘ಎಷ್ಟು ಜನ ಅಂಗವಿಕಲರು ಯುಡಿಐಡಿ ಕಾರ್ಡ್ ಪಡೆದಿದ್ದಾರೆ, ಇನ್ನೂ ಎಷ್ಟು ಬಾಕಿ ಇದೆ, ಮಾಸಾಶನ ಎಷ್ಟು ಜನರಿಗೆ ತಲುಪುತ್ತಿದೆ ಎಂಬುದು ಸೇರಿದಂತೆ ಎಲ್ಲ ಮಾಹಿತಿಯನ್ನೂ ಮನೆ ಮನೆಗೆ ಭೇಟಿ ನೀಡಿ ದಾಖಲಿಸಲಾಗುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಟ ಎರಡು ಅಂಗವಿಕಲರ ಸ್ವ-ಸಹಾಯ ಗುಂಪುಗಳನ್ನು ಶೀಘ್ರ ರಚಿಸಲಾಗುವುದು. ಈ ನಿಟ್ಟಿನಲ್ಲಿ ವಿಆರ್‌ಡಬ್ಲ್ಯೂಗಳು ಕಾರ್ಯಪ್ರವೃತ್ತರಾಗಬೇಕು’ ಎಂದರು.
‘ಮುಂದಿನ ದಿನಗಳಲ್ಲಿ ಸುಗಮ್ಯ ಯಾತ್ರೆ ಕೈಗೊಳ್ಳಲಾಗುತ್ತಿದೆ. ಅಂಗವಿಕಲರ ಸಬಲೀಕರಣಕ್ಕೆ ಉತ್ತಮ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು. ಕಾರ್ಮಿಕ ಕಾಯ್ದೆ ಅನುಸಾರ ಕನಿಷ್ಠ ವೇತನ ನೀಡಲು ಅಗತ್ಯ ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.
‘ಗ್ರಾಮ ಪಂಚಾಯಿತಿ, ಸರ್ಕಾರಿ ಆಸ್ಪತ್ರೆ, ಗ್ರಂಥಾಲಯ, ಬ್ಯಾಂಕ್, ಪ್ರವಾಸಿ ಮಂದಿರ ಸೇರಿದಂತೆ ಸಾರ್ವಜನಿಕ ಕಟ್ಟಡಗಳು ಅಂಗವಿಕಲ ಸ್ನೇಹಿಯಾಗಿರಬೇಕು. ಎಲ್ಲ ಕಟ್ಟಡಗಳಿಗೂ ರ‍್ಯಾಂಪ್, ರೇಲಿಂಗ್ಸ್ ಅಳವಡಿಸಿಕೊಳ್ಳಬೇಕು. ಇವೆಲ್ಲವುಗಳನ್ನು ಎಲ್ಲಿ ಅಳವಡಿಸಿದ್ದಾರೆ, ಎಲ್ಲಿ ಅಳವಡಿಸಿಲ್ಲ ಎಂಬ ಕುರಿತು ನಿಖರ ಮಾಹಿತಿ ಸಂಗ್ರಹಿಸಿದರೆ ಕ್ರಿಯಾಯೋಜನೆ ರೂಪಿಸಲು ನೆರವಾಗುತ್ತದೆ’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಹೇಳಿದರು.
ರಾಷ್ಟ್ರೀಯ ಆಯುಕ್ತ ಗೋವಿಂದರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.