ADVERTISEMENT

ಅತಂತ್ರ ಸ್ಥಿತಿಯಲ್ಲಿ ಯಾದಗಿರಿ ಕಾರ್ಮಿಕರು

ಊರಿಗೆ ವಾಪಸ್ ಹೋಗುವಾಗ 125 ಕಾರ್ಮಿಕರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 14:39 IST
Last Updated 15 ಏಪ್ರಿಲ್ 2020, 14:39 IST
ಮೊಳಕಾಲ್ಮೂರು ತಾಲ್ಲೂಕಿನ ಯರ್ರೇನಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಮುಖ್ಯದ್ವಾರಕ್ಕೆ ಮುಳ್ಳಿನ ಗಿಡ ಹಾಕಿರುವುದು.
ಮೊಳಕಾಲ್ಮೂರು ತಾಲ್ಲೂಕಿನ ಯರ್ರೇನಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಮುಖ್ಯದ್ವಾರಕ್ಕೆ ಮುಳ್ಳಿನ ಗಿಡ ಹಾಕಿರುವುದು.   

ಮೊಳಕಾಲ್ಮೂರು: ಬೆಂಗಳೂರಿನಿಂದ ಯಾದಗಿರಿಗೆ ತೆರಳುತ್ತಿದ್ದ 125 ಕಾರ್ಮಿಕರನ್ನು ತಾಲ್ಲೂಕಿನ ತಮ್ಮೇನಹಳ್ಳಿ ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದು, ಕಾರ್ಮಿಕರು ತ್ರಿಶಂಕು ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಸೋಮವಾರ ವಶಕ್ಕೆ ಪಡೆದ ತಾಲ್ಲೂಕು ಆಡಳಿತ 'ಕ್ವಾರಂಟೈನ್‘ ಮಾಡಲು ರಾಂಪುರ ಆಶ್ರಯ ಶಾಲೆಗೆ ಕರೆತಂದಿತ್ತು. ಕಾರ್ಮಿಕರ ಪೈಕಿ 30 ಹಸುಗೂಸುಗಳು, 20 ಸಣ್ಣ ಮಕ್ಕಳು, ವೃದ್ಧರು ಇದ್ದರು.

'ನಮಗೆ ಯಾವ ಕ್ವಾರಂಟೈನ್‌ ಬೇಡ ಊರಿಗೆ ಕಳುಹಿಸಿ' ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಜಿಲ್ಲಾಧಿಕಾರಿ ಮೊರೆ ಹೋಯಿತು. ಊಟ, ತಿಂಡಿಯನ್ನು ತಿನ್ನದೇ ಸಿಬ್ಬಂದಿ ಜತೆ ಗಲಾಟೆ ಮಾಡುತ್ತಿದ್ದ ಕಾರ್ಮಿಕರ ಜತೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿ ತುಸು ಸಮಾಧಾನಪಡಿಸಿದರು. ಆಗ ಕಾರ್ಮಿಕರು ಸಂಜೆಯ ವೇಳೆ ಊಟ ಮಾಡಿದರು.

ADVERTISEMENT

ಮಂಗಳವಾರ ಬೆಳಿಗ್ಗೆ ರಾಂಪುರ ಗ್ರಾಮಸ್ಥರು ’ನಮ್ಮ ಗ್ರಾಮದಲ್ಲಿ ಕ್ವಾರಂಟೈನ್ ಮಾಡುವುದು ಬೇಡ. ವಸತಿಶಾಲೆ ಗ್ರಾಮದ ಮಧ್ಯಭಾಗದಲ್ಲಿದೆ. ನಮಗೂ ರೋಗ ಬರಬಹುದು. ಆದ್ದರಿಂದ ಇಲ್ಲಿಂದ ಸ್ಥಳಾಂತರ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ‘ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರತಿಭಟನೆ:ಕ್ವಾರಂಟೈನ್‌ ಮುಂದುವರಿಸಲು ರಾಯಾಪುರ ಸಮೀಪದ ಯರ್ರೇನಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಗೆ ಸ್ಥಳಾಂತರ ಮಾಡಲು ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿರುವ ಮಾಹಿತಿ ತಿಳಿದ ಗ್ರಾಮಸ್ಥರು ’ಇಲ್ಲಿಗೆ ಕರೆದುಕೊಂಡು ಬರುವುದು ಬೇಡ‘ ಎಂದು ಮಂಗಳವಾರ ಸಂಜೆ ಶಾಲೆ ಮುಖ್ಯದ್ವಾರಕ್ಕೆ ಮುಳ್ಳುಬೇಲಿ ಹಾಕಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.