ADVERTISEMENT

ಕುಟುಂಬ ಸಮೇತ ಯದುವೀರ್‌ ಒಡೆಯರ್ ಭೇಟಿ

ಕುಟುಂಬದವರೊಂದಿಗೆ ವಾಣಿವಿಲಾಸ, ಗಾಯತ್ರಿ ಜಲಾಶಯ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 5:14 IST
Last Updated 27 ಜೂನ್ 2022, 5:14 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಭಾನುವಾರ ಮೈಸೂರಿನ ಒಡೆಯರ್ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕುಟುಂಬಸ್ಥರು ಭೇಟಿ ನೀಡಿದ್ದರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಭಾನುವಾರ ಮೈಸೂರಿನ ಒಡೆಯರ್ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕುಟುಂಬಸ್ಥರು ಭೇಟಿ ನೀಡಿದ್ದರು.   

ಹಿರಿಯೂರು: ಬೆಂಗಳೂರಿನಿಂದ ಹಂಪಿಗೆ ಹೋಗುವ ಮಾರ್ಗದಲ್ಲಿ ಭಾನುವಾರ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತ್ನಿ ತ್ರಿಷಿಕಾ ಕುಮಾರಿದೇವಿ, ಪುತ್ರ ಆದ್ಯವೀರ್ ನರಸಿಂಹರಾಜ ಒಡೆಯರ್ ಹಾಗೂ ಅತ್ತೆ ಮಹಿಶ್ರೀ ಕುಮಾರಿ ಅವರೊಂದಿಗೆ ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ ಇರುವ ಗಾಯತ್ರಿ ಹಾಗೂ ಮಾರಿಕಣಿವೆ ಸಮೀಪ ಇರುವ ವಾಣಿವಿಲಾಸ ಜಲಾಶಯಕ್ಕೆ ಭೇಟಿ ನೀಡಿದ್ದರು.

ಮೈಸೂರಿನ ಒಡೆಯರ್ ವಂಶಸ್ಥರನ್ನು ಬರಮಾಡಿಕೊಂಡ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಎಇಇ ಚಂದ್ರಮೌಳಿ, ಎಇಗಳಾದ ಪರಶುರಾಂ, ನಿಜ್ಜೇಗೌಡ ಎರಡೂ ಜಲಾಶಯ ನಿರ್ಮಾಣದ ಬಗ್ಗೆ ವಿವರಿಸಿದರು.

ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವಕೀಲ ಕೆ. ಕೆಂಚಪ್ಪನವರು ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮದ ಸಮೀಪ ಜಲಾಶಯ ನಿರ್ಮಿಸಲು ಜಯಚಾಮರಾಜೇಂದ್ರ ಒಡೆಯರ್ ಅವರನ್ನುಆಹ್ವಾನಿಸಿ 1958ರಲ್ಲಿಅಡಿಗಲ್ಲು ಹಾಕಿಸಿದ್ದರು.
₹ 40 ಲಕ್ಷ ವೆಚ್ಚದಲ್ಲಿ ಐದೇ ವರ್ಷದಲ್ಲಿ ಜಲಾಶಯವನ್ನು ನಿರ್ಮಿಸಿ, ಅದಕ್ಕೆ ಮೈಸೂರು ಒಡೆಯರ್ ಕುಟುಂಬದ ಪುತ್ರಿ ‘ಗಾಯತ್ರಿದೇವಿ’ ಹೆಸರಿಡಲಾಯಿತು ಎಂದು ಯದುವೀರ್ ಅವರಿಗೆ ಚಂದ್ರಮೌಳಿ ಗಾಯತ್ರಿ ಜಲಾಶಯದ ಮಾಹಿತಿ ನೀಡಿದರು.

ADVERTISEMENT

‘ವಾಣಿವಿಲಾಸಪುರ ಬಳಿ ಮಾರೀಕಣಿವೆ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಾಣಿವಿಲಾಸ ಜಲಾಶಯ ನಿರ್ಮಿಸಲಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ಅವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿ ಅವರ ಹೆಸರಿನಲ್ಲಿ 1897ರಲ್ಲಿ ಜಲಾಶಯ ನಿರ್ಮಾಣ ಕಾಮಗಾರಿ ಆರಂಭಿಸಿ ಕೇವಲ ಹತ್ತು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು. ಈ ಭಾಗದಲ್ಲಿಯೇ ಇಷ್ಟು ದೊಡ್ಡ ಜಲಾಶಯ ಮತ್ತೊಂದಿಲ್ಲ’ ಎಂದು ಯದುವೀರ್‌ ಅವರಿಗೆ ವಾಣಿವಿಲಾಸ ಜಲಾಶಯದಬಗ್ಗೆ ತಿಳಿಸಿದರು.

ಎಂಜಿನಿಯರ್ ಅವರಿಂದ ಮಾಹಿತಿ ಪಡೆದ ಯದುವೀರ್ ಅವರು ಪತ್ನಿ ಹಾಗೂ ಅತ್ತೆಯ ಜೊತೆ ಹಂಚಿಕೊಂಡರು.ಬಳಿಕ ಒಡೆಯರ್ ಕುಟುಂಬ ಹಂಪಿಯತ್ತ ಪ್ರಯಾಣ ಬೆಳೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.