ADVERTISEMENT

ಚಿತ್ರದುರ್ಗ | ಯುವಶಕ್ತಿಯಿಂದ ಸುಂದರ ದೇಶ ನಿರ್ಮಾಣ: ರೋಣ ವಾಸುದೇವ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:00 IST
Last Updated 11 ಸೆಪ್ಟೆಂಬರ್ 2025, 6:00 IST
ಚಿತ್ರದುರ್ಗದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ನ್ಯಾಯಾಧೀಶ ಹುದ್ದೆ ಪರೀಕ್ಷಾರ್ಥಿಗಳ ತರಬೇತಿ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶ ರೋಣ ವಾಸುದೇವ ಮಾತನಾಡಿದರು
ಚಿತ್ರದುರ್ಗದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ನ್ಯಾಯಾಧೀಶ ಹುದ್ದೆ ಪರೀಕ್ಷಾರ್ಥಿಗಳ ತರಬೇತಿ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶ ರೋಣ ವಾಸುದೇವ ಮಾತನಾಡಿದರು   

ಚಿತ್ರದುರ್ಗ: ‘ದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯ ಯುವಜನರಿದ್ದು, ಅವರ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಸುಂದರ ದೇಶ ನಿರ್ಮಾಣ ಮಾಡಬಹುದು. ಯುವಕರು ಮನಸ್ಸು ಮಾಡಿದರೆ ಸರ್ಕಾರವನ್ನೂ ಕಿತ್ತು ಹಾಕಬಹುದು ಎಂಬುದಕ್ಕೆ ನೇಪಾಳದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿಯಾಗಿವೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.

ವಕೀಲರ ಭವನದಲ್ಲಿ ಬುಧವಾರ ನಡೆದ ಸಿವಿಲ್ ನ್ಯಾಯಾಧೀಶರ ಪರೀಕ್ಷಾರ್ಥಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅತಿಯಾದ ಆತ್ಮವಿಶ್ವಾಸದಿಂದ ಕೆಲವೊಮ್ಮೆ ಸಿಗುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಯುವಕರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನ್ಯಾಯಾಧೀಶರ ಪರೀಕ್ಷಾರ್ಥಿಗಳಿಗೆ ತರಬೇತಿ ಅಗತ್ಯವೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಹೇಗೆ ಮತಚಲಾಯಿಸಬೇಕೆಂದು ಲೋಕಸಭೆ ಹಾಗೂ ರಾಜ್ಯಸಭೆ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಆದರೂ 15 ಮತಗಳು ಅಸಿಂಧುಗೊಂಡಿವೆ. ಹೀಗಾಗಿ ಎಲ್ಲರಿಗೂ ತರಬೇತಿಯ ಅವಶ್ಯಕತೆ ಇದೆ’ ಎಂದರು.

ADVERTISEMENT

‘ಚಿತ್ರದುರ್ಗ ನ್ಯಾಯಾಲಯದಲ್ಲಿ 11 ನ್ಯಾಯಾಧೀಶರು ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಗೊತ್ತಿರುವ ವಿಷಯವನ್ನು ತರಬೇತಿಯಲ್ಲಿ ನಿಮ್ಮ ಜೊತೆ ಹಂಚಿಕೊಳ್ಳುತ್ತೇವೆ. ಜಿಲ್ಲೆಯಿಂದ ಹೆಚ್ಚಿನ ನ್ಯಾಯಾಧೀಶರು ನ್ಯಾಯಾಂಗ ಇಲಾಖೆಗೆ ಬರಬೇಕು. ಮೂರು ಹಂತದಲ್ಲಿ ಪರೀಕ್ಷೆಗಳು ನಡೆಯುತ್ತವೆ. ಕಾನೂನು ವಿಷಯಗಳ ತರಬೇತಿ ಜೊತೆ ಕಂಪ್ಯೂಟರ್‌ ಬಗ್ಗೆಯೂ ತಿಳಿದುಕೊಂಡಿದ್ದರೆ ಒಳ್ಳೆಯದು. ತರಬೇತಿಯಲ್ಲಿ ಭಾಗವಹಿಸಿ ಜ್ಞಾನ ಪಡೆದುಕೊಂಡರೆ ಪರೀಕ್ಷೆಗಷ್ಟೇ ಅಲ್ಲ, ವೃತ್ತಿಗೂ ಸಹಾಯವಾಗಲಿದೆ’ ಎಂದು ತಿಳಿಸಿದರು.

‘ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ವಾದ-ವಿವಾದಗಳನ್ನು ವೀಕ್ಷಿಸಬೇಕು. ನ್ಯಾಯಾಂಗ ಇಲಾಖೆಗೆ ತನ್ನದೇ ಆದ ಗೌರವವಿದೆ. ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಎಲ್ಲರೂ ನಡೆದುಕೊಳ್ಳಬೇಕು. ಅಶಿಸ್ತಿನಿಂದ ವರ್ತಿಸುವುದು ಸರಿಯಲ್ಲ. ವಕೀಲರು ಶಿಸ್ತು, ಸಂಯಮದಿಂದ ನಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಮಹೇಶ್ವರಪ್ಪ ಮಾತನಾಡಿ ‘70 ಯುವ ವಕೀಲರು ನ್ಯಾಯಾಧೀಶ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಸಂಘದಿಂದ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ. ಒಮ್ಮೆ ಪರೀಕ್ಷೆಯಲ್ಲಿ ಫೇಲಾದೆವೆಂದು ಹಿಂದೆ ಸರಿಯುವುದು ಬೇಡ. ಸತತ ಪ್ರಯತ್ನದಿಂದ ಯಶಸ್ಸು ಕಾಣಬಹುದು’ ಎಂದು ತಿಳಿಸಿದರು.

1ನೇ ಹೆಚ್ಚುವರಿ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್, 2ನೇ ಹೆಚ್ಚುವರಿ ನ್ಯಾಯಾಧೀಶರಾದ ಗಂಗಾಧರ್ ಹಡಪದ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಮಮತಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಂ.ಚೈತ್ರಾ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.