ADVERTISEMENT

ಚಿತ್ರದುರ್ಗ: ವಿಜಯಲಕ್ಷ್ಮಿ ಜಿ.ಪಂ. ನೂತನ ಉಪಾಧ್ಯಕ್ಷೆ,

ಮಾಡದಕೆರೆ ಕ್ಷೇತ್ರದ ಸದಸ್ಯೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 13:06 IST
Last Updated 19 ಆಗಸ್ಟ್ 2020, 13:06 IST
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿ ನೂತನವಾಗಿ ಆಯ್ಕೆಯಾದ ವಿಜಯಲಕ್ಷ್ಮಿ ಅವರನ್ನು ಅಧ್ಯಕ್ಷೆ ಶಶಿಕಲಾ ಹಾಗೂ ಮಹಿಳಾ ಸದಸ್ಯರು ಬುಧವಾರ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿ ನೂತನವಾಗಿ ಆಯ್ಕೆಯಾದ ವಿಜಯಲಕ್ಷ್ಮಿ ಅವರನ್ನು ಅಧ್ಯಕ್ಷೆ ಶಶಿಕಲಾ ಹಾಗೂ ಮಹಿಳಾ ಸದಸ್ಯರು ಬುಧವಾರ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.   

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಪ್ರಕಾಶ್‌ ಅವಿರೋಧವಾಗಿ ಆಯ್ಕೆಯಾದರು. ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಕ್ಷೇತ್ರವನ್ನು ಇವರು ಪ್ರತಿನಿಧಿಸುತ್ತಿದ್ದಾರೆ.

ಮೊಳಕಾಲ್ಮುರು ತಾಲ್ಲೂಕು ರಾಂಪುರ ಕ್ಷೇತ್ರದ ಎನ್‌.ಪಿ.ಸುಶೀಲಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಪ್ರಾದೇಶಿಕ ಆಯುಕ್ತ ನವೀನ್‌ ರಾಜ್‌ ಸಿಂಗ್‌ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ಕಾಂಗ್ರೆಸ್‌ ಪಕ್ಷದ ಸದಸ್ಯೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರಿಂದ ಕೈ ಪಾಳಯದಲ್ಲಿ ಸಂಭ್ರಮ ಕಾಣಿಸಿಕೊಂಡಿತು. ಕಾಂಗ್ರೆಸ್‌ ಮುಖಂಡರು ಹಾಗೂ ಜನಪ್ರತಿನಿಧಿಗಳು ಜಿಲ್ಲಾ ಪಂಚಾಯಿತಿಗೆ ಭೇಟಿ ನೀಡಿ ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು. 37 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ 23, ಬಿಜೆಪಿ 10, ಜೆಡಿಎಸ್‌ 2 ಹಾಗೂ ಇಬ್ಬರು ಪಕ್ಷೇತರು ಇದ್ದಾರೆ.

ADVERTISEMENT

ಚುನಾವಣೆ ಪ್ರಕ್ರಿಯೆ ಬೆಳಿಗ್ಗೆಯಿಂದಲೇ ಆರಂಭವಾದವು. ಬೆಳಿಗ್ಗೆ 9ರಿಂದ 10ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ವಿಜಯಲಕ್ಷ್ಮಿ ಎರಡು ನಾಮಪತ್ರಗಳನ್ನು ಸಲ್ಲಿಕೆ ಮಾಡಿದರು. ನಿಗದಿತ ಅವಧಿಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ನಾಮಪತ್ರ ಉರ್ಜಿತವಾಗಿವೆ ಎಂಬುದನ್ನು ದೃಢಪಡಿಸಿದರು. ಆಗಲೇ ಅವಿರೋಧ ಆಯ್ಕೆ ಬಹುತೇಕ ಖಚಿವಾಗಿತ್ತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಧ್ಯಾಹ್ನ 12ಕ್ಕೆ ಮತದಾನ ಪ್ರಕ್ರಿಯೆ ಆರಂಭವಾಯಿತು. 37 ಸದಸ್ಯರ ಪೈಕಿ 28 ಸದಸ್ಯರು ಸಭೆಗೆ ಹಾಜರಾಗಿದ್ದರು. ಕೋರಂ ಇರುವುದನ್ನು ಖಚಿತಪಡಿಸಿಕೊಂಡ ಚುನಾವಣಾಧಿಕಾರಿ ನವೀನ್‌ ರಾಜ್‌ ಸಿಂಗ್‌ ಸಭೆಗೆ ಅನುಮತಿ ನೀಡಿದರು. ವಿಜಯಲಕ್ಷ್ಮಿ ಅವರು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಘೋಷಣೆ ಮಾಡಿದರು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.