ADVERTISEMENT

ಸಾವಿರ ಕೆರೆ ಸಂರಕ್ಷಣೆಗೆ ನಿರ್ಧಾರ

ಉದ್ಯೋಗ ಖಾತರಿ ಸದ್ಬಳಕೆಗೆ ಜಿಲ್ಲಾ ಪಂಚಾಯಿತಿ ಯೋಜನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 14:38 IST
Last Updated 26 ಏಪ್ರಿಲ್ 2019, 14:38 IST
ಸಿ. ಸತ್ಯಭಾಮಾ
ಸಿ. ಸತ್ಯಭಾಮಾ   

ಚಿತ್ರದುರ್ಗ: ಉದ್ಯೋಗ ಖಾತರಿ ಯೋಜನೆಯಡಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಕೆರೆ, ಕಟ್ಟೆಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯತಿ ಮುಂದಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದ್ದಾರೆ.

ನೈಸರ್ಗಿಕ ಜಲ ಸಂರಕ್ಷಣೆಯನ್ನು ಆಂದೋಲನವನ್ನಾಗಿ ಕೈಗೊಳ್ಳಲಾಗುತ್ತಿರುವ ಕುರಿತು ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ಚಿತ್ರದುರ್ಗ ಜಿಲ್ಲೆ ಪದೇ ಪದೇ ಬರ ಪರಿಸ್ಥಿತಿ ಎದುರಿಸುತ್ತಿದೆ. ಜನ, ಜಾನುವಾರು ಪ್ರತಿ ವರ್ಷ ಸಂಕಷ್ಟಕ್ಕೆ ಸಿಲುಕುತ್ತಿವೆ. ಜಿಲ್ಲೆಯಲ್ಲಿ ಜಲಮೂಲ ಕಡಿಮೆಯಾಗುತ್ತಿದ್ದು, ಕೆರೆ, ಕಟ್ಟೆಗಳಿಗೆ ಹರಿದು ಬರುವ ನೀರಿನ ಮಾರ್ಗ, ಕಾಲುವೆಗಳಲ್ಲಿ ಹೂಳು ತುಂಬಿವೆ’ ಎಂದು ಹೇಳಿದರು.

ADVERTISEMENT

‘ಇದರಿಂದ ಕೆರೆ, ಕಟ್ಟೆಗಳಲ್ಲಿ ನೀರು ಕಾಣದಾಗಿದೆ. ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿನ ಕೂಲಿಕಾರರು ಉದ್ಯೋಗ ಅರಸಿ ನಗರ, ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ನೀರಿನ ಮೂಲಗಳನ್ನು ಉಳಿಸಿಕೊಳ್ಳುವುದು ಹಾಗೂ ಅಭಿವೃದ್ಧಿಪಡಿಸುವುದು ಅವಶ್ಯಕವೆನಿಸಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಜಲಮೂಲ ಸಂರಕ್ಷಣೆ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲು ಜಿಲ್ಲಾ ಪಂಚಾಯತಿ ನಿರ್ಧರಿಸಿದೆ’ ಎಂದು ತಿಳಿಸಿದ್ದಾರೆ.

‘ಇದರಿಂದ ಎರಡು ಬಗೆಯ ಪ್ರಯೋಜನಗಳಾಗಲಿವೆ. ಜಲಮೂಲ ಅಭಿವೃದ್ಧಿ ಜತೆಗೆ ಹೆಚ್ಚು ಜನರಿಗೆ ಕೂಲಿ ಕೆಲಸ ನೀಡಲು ಸಾಧ್ಯವಿದೆ. ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವುದನ್ನು ತಪ್ಪಿಸಿದಂತಾಗಲಿದೆ. ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವಂತೆ ಮಾಡಲು ಜಿಲ್ಲಾ ಪಂಚಾಯತಿ ಬದ್ಧವಾಗಿದೆ’ ಎಂದು ವಿವರಿಸಿದ್ದಾರೆ.

‘ಈಗಾಗಲೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆರೆ ಹೂಳೆತ್ತುವುದು, ಗೋಕಟ್ಟೆ ಅಭಿವೃದ್ಧಿ, ಕೃಷಿಹೊಂಡ, ಬದು ನಿರ್ಮಾಣ, ಕಲ್ಯಾಣಿ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಈ ವರ್ಷ ಸುಮಾರು ಒಂದು ಸಾವಿರ ಕೆರೆಗಳ ಹೂಳೆತ್ತುವುದು, ಗೋಕಟ್ಟೆ, ಕಲ್ಯಾಣಿಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯತಿ, ಸಣ್ಣ ನೀರಾವರಿ ಸೇರಿ ಇತರ ಇಲಾಖೆಗಳ ಜಲಮೂಲಗಳೂ ಒಳಗೊಂಡಿವೆ’ ಎಂದು ಹೇಳಿದ್ದಾರೆ.

‘ಏಪ್ರಿಲ್ ತಿಂಗಳ 26 ದಿನಗಳಲ್ಲಿ 11,390 ಕೂಲಿಕಾರರಿಗೆ ಉದ್ಯೋಗ ನೀಡಲಾಗಿದೆ. ಈ ಮೂಲಕ 91,920 ಮಾನವ ದಿನಗಳನ್ನು ಸೃಜಿಸಲಾಗಿದೆ. 2018-19 ನೇ ಸಾಲಿನಲ್ಲಿ ಒಟ್ಟು 2.02 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿತ್ತು. 63 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ಐಇಸಿ ಜಿಲ್ಲಾ ಸಂಯೋಜಕ ರವೀಂದ್ರನಾಥ್, ‘ಪ್ರತಿ ಮನೆಗೆ ಭೇಟಿ ನೀಡಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಪಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಯೋಜನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಜಾಬ್ ಕಾರ್ಡ್ ಹೊಂದದೇ ಇರುವವರಿಗೆ ಹೊಸ ಜಾಬ್ ಕಾರ್ಡ್ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.