ADVERTISEMENT

ಗೋಣಿಕೊಪ್ಪಲು: ಪೌರಕಾರ್ಮಿಕರ ಬದುಕು ಶೋಚನೀಯ

ವಾಸಕ್ಕೆ ಬೆಚ್ಚನೆಯ ಸೂರಿಲ್ಲ, ಸಂಚಾರಕ್ಕೆ ಸೂಕ್ತ ರಸ್ತೆ ಇಲ್ಲ, ಸ್ವಚ್ಛತಾ ಸಿಬ್ಬಂದಿ ಗೋಳು ಕೇಳೋರಿಲ್ಲ

ಜೆ.ಸೋಮಣ್ಣ
Published 23 ನವೆಂಬರ್ 2019, 19:45 IST
Last Updated 23 ನವೆಂಬರ್ 2019, 19:45 IST

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ನಗರ ಗೋಣಿಕೊಪ್ಪಲು. ವಿಸ್ತೀರ್ಣ, ಜನಸಂಖ್ಯೆ, ವ್ಯಾಪಾರ ವಹಿವಾಟು ಹಾಗೂ ವಾಹನಗಳ ಓಡಾಟ ಎಲ್ಲದರಲ್ಲಿಯೂ ಮುಂಚೂಣಿ. ನಿತ್ಯ ವ್ಯಾಪಾರ ನಡೆಸುವ ಸಾವಿರಾರು ಅಂಗಡಿ ಮಳಿಗೆಗಳಿದ್ದರೆ ವಾರಕ್ಕೆ ಒಮ್ಮೆ ಸಂತೆ ಭರ್ಜರಿಯಾಗಿ ನಡೆಯಲಿದೆ.

ಇಂಥ ಪಟ್ಟಣದಲ್ಲಿ ಸಹಜವಾಗಿಯೇ ಜನ ಜಂಗುಳಿ ಹಾಗೂ ಕಸದ ರಾಶಿ ತುಂಬುವುದು ಸಹಜ. ಇದನ್ನು ಸ್ವಚ್ಛ ಮಾಡುವುದಕ್ಕಾಗಿಯೇ ಗ್ರಾಮ ಪಂಚಾಯಿತಿ ಹತ್ತಾರು ಪೌರ ಕಾರ್ಮಿಕರನ್ನು ನೇಮಿಸಿಕೊಂಡಿದೆ.

ಈ ಕಾರ್ಮಿಕರು ಬೆಳಿಗ್ಗೆ, ಸಂಜೆ ಪಟ್ಟಣವನ್ನು ಸ್ವಚ್ಛಗೊಳಿಸುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಸ್ವಚ್ಛ ಭಾರತ್ ಘೋಷಣೆ ಗ್ರಾಮ ಪಂಚಾಯಿತಿಗೆ ಕಳಂಕ ತಾರದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಇವರು ಗುಡಿಸಿ ಗುಡ್ಡೆ ಹಾಕಿದ ಕಸವನ್ನು ವಿಲೇವಾರಿ ಮಾಡಲು ಜಾಗವೂ ಇಲ್ಲ; ಇದರಿಂದ ಗ್ರಾಮ ಪಂಚಾಯಿತಿಯೇ ಕೆಟ್ಟ ಹೆಸರು ತಂದುಕೊಳ್ಳುತ್ತಿದೆ.

ADVERTISEMENT

ಇತ್ತ ಪೌರ ಕಾರ್ಮಿಕರಿಗೂ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಪಂಚಾಯಿತಿ ವಿಫಲವಾಗಿದೆ. ಗ್ರಾಮ ಪಂಚಾಯಿತಿಯಲ್ಲಿ 18 ಜನ ಪೌರ ಕಾರ್ಮಿಕರಿದ್ದಾರೆ. ಇವರ್‍ಯಾರೂ ಕಾಯಂಗೊಂಡಿಲ್ಲ. ಬೆಳಿಗ್ಗೆ ಮತ್ತು ಸಂಜೆ ಪಟ್ಟಣದ ಕಸ ಗುಡಿಸಿ ಸ್ವಚ್ಛಗೊಳಿಸುತ್ತಾರೆ. ಬಳಿಕ ಗುಡ್ಡೆ ಹಾಕಿದ ಕಸವನ್ನು ಟ್ಯ್ರಾಕ್ಟರ್‌ನಲ್ಲಿ ತುಂಬಿಸಿ ಸಾಗಿಸುತ್ತಾರೆ. 50 ವರ್ಷಗಳಿಂದ ಪಟ್ಟಣವನ್ನು ಸ್ವಚ್ಛಗೊಳಿಸಿಕೊಂಡು ಬರುತ್ತಿರುವ ಪೌರ ಕಾರ್ಮಿಕರಿಗೆ ವಾಸಿವುದಕ್ಕೆ ಬೆಚ್ಚನೆಯ ಸೂರಿಲ್ಲ. ಪ್ರಾಣಿ ಗೂಡುಗಳಿಗಿಂತಲೂ ಕಡೆಯಾದ ಗುಡಿಸಿಲಿನಲ್ಲಿ ಇವರ ವಾಸ. ಈ ಗುಡಿಸಲುಗಳನ್ನು ಗ್ರಾಮ ಪಂಚಾಯಿತಿಯೇ ಮಾಡಿಕೊಟ್ಟಿದೆ. ಸುತ್ತಲೂ ಮಾರುಕಟ್ಟೆ ಮಧ್ಯದಲ್ಲಿ ಹಳ್ಳ. ಇಂತಹ ಸ್ಥಳದಲ್ಲಿ ಇವರ ವಾಸದ ಗುಡಿಸಲುಗಳು.

ಪೌರ ಕಾರ್ಮಿಕರ ಗುಡಿಸಿಲಿನ ಸುತ್ತಲೂ ಮೀನು, ಕುರಿ, ಕೋಳಿ ಮಾಂಸ ಹಾಗೂ ಹಂದಿ ಮಾಂಸದ ಮಳಿಗೆಗಳಿವೆ. ಮಳಿಗೆಗಳ ಕೊಳಕು ನೀರು ಪೌರ ಕಾರ್ಮಿಕರ ಗುಡಿಸಿಲಿನ ಮುಂದೆ ನಿತ್ಯವೂ ಹರಿಯುತ್ತಿದೆ. ಇದರ ದುರ್ವಾಸೆಯನ್ನು ಸಹಿಸಿಕೊಂಡು ಬದುಕುವ ಸ್ಥಿತಿ ಅವರದ್ದು.

ವಾಸದ ಗುಡಿಸಲೂ ಕೂಡ ಬೀಳುವ ಸ್ಥಿತಿ ತಲುಪಿವೆ. ಕಿಟಕಿಗಳಿಲ್ಲ. ಸುರಕ್ಷಿತ ಬಾಗಿಲುಗಳಿಲ್ಲ. 30X60 ಸುತ್ತಳತೆಯ ಹಳ್ಳದಲ್ಲಿ 21 ಕುಟುಂಬಗಳು ವಾಸಿಸುತ್ತಿವೆ. ಈ ಮನೆಗಳಿಗೆ ತೆರಳಲೂ ದಾರಿಯಿಲ್ಲ. ರಾತ್ರಿ ವೇಳೆ ನಡೆದಾಡುವವರು ಬಹಳ ಮಂದಿ ಚರಂಡಿಗೆ ಬಿದ್ದು ಕೈ ಕಾಲು ನೋವು ಮಾಡಿಕೊಂಡಿದ್ದಾರೆ. ಇನ್ನೂ ಮಕ್ಕಳು ಬಿದ್ದು ನೋವು ಮಾಡಿಕೊಂಡಿರುವ ಘಟನೆ ಲೆಕ್ಕವಿಲ್ಲ. ಮನೆಗಳಿಗೆ ಶೌಚಾಲಯವಿಲ್ಲ. ಕುಡಿಯಲು ಶುದ್ಧ ನೀರಿಲ್ಲ. ಪೌರ ಕಾರ್ಮಿಕರ ಬದುಕು ನರಕ ಸದೃಶ. 10X10 ವಿಸ್ತೀರ್ಣದ ಗುಡಿಸಿಲಿನ ಒಳಗೆ ಮಕ್ಕಳಿಗೆ ಓದಲು ಜಾಗವಿಲ್ಲ. ಮಲಗಲೂ ಸ್ಥಳಾವಕಾಶವಿಲ್ಲ.

ಪಟ್ಟಣ ಸ್ವಚ್ಚಗೊಳಿಸುವ ಪೌರಕಾರ್ಮಿಕರ ಬದುಕು ಶೋಚನೀಯವಾಗಿ ಉಳಿದಿದೆ. ಒಂದು ಕಡೆ ಕೊಳೆತ ಕಸ ಬಾಚುವುದು. ಮತ್ತೊಂದು ಕಡೆ ಗಾಳಿ ಬೆಳಕುಗಳಿಲ್ಲದ ವಾಸದ ಮನೆ. ದುರ್ವಾಸನೆ ಬೀರುವ ಚರಂಡಿ, ಇವುಗಳಿಂದ ಪೌರ ಕಾರ್ಮಿಕರು ಹಾಗೂ ಮಕ್ಕಳು ಹಲವು ರೋಗ ರುಜಿನಗಳಿಂದ ನರಳುತ್ತಿದ್ದಾರೆ. ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣವಿಲ್ಲ. ಕಾರ್ಮಿಕರು ರಕ್ತ ಹೀನತೆಯಿಂದ ಬಳಲುತ್ತಿದ್ದರೆ, ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ ಎಂದು ನೋವಿನ ನುಡಿಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.