ADVERTISEMENT

ಕಾಡಮಂಗೇರಾ (ಬಿ) ದುರ್ಗಾದೇವಿ ಜಾತ್ರೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 13:41 IST
Last Updated 9 ಏಪ್ರಿಲ್ 2020, 13:41 IST

ವಡಗೇರಾ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ವಡಗೇರಾ(ಬಿ) ಗ್ರಾಮದಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಬುಧವಾರ ದುರ್ಗಾದೇವಿ ಜಾತ್ರೆ ನಡೆಸಿದ ಆರೋಪದ ಮೇಲೆ ದೇವಸ್ಥಾನದ ಪೂಜಾರಿ ಸಿದ್ದಯ್ಯ ಕಲ್ಮನಿ, ಗುರುಪ್ಪ ಬಡಿಗೇರ, ಮೌನೇಶ ವಿಶ್ವಕರ್ಮ, ರಾಜಪ್ಪ ವಿಶ್ವಕರ್ಮ, ಪ್ರಕಾಶ ವಿಶ್ವಕರ್ಮ, ರಾಮಲಿಂಗಪ್ಪ ವಿಶ್ವಕರ್ಮ ಹಾಗೂ ಗ್ರಾಮದ 60-70 ಜನ ಮೇಲೆ ದೂರು ದಾಖಲಾಗಿದೆ.

ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರ ಜಾತ್ರೆ, ಸಂತೆ, ಸಾರ್ವಜನಿಕ ಸಭೆ, ಮದುವೆ ನಿಷೇಧಿಸಿದೆ. ಅಲ್ಲದೆ ಲಾಕ್ ಡೌನ್ ಮಾಡಿದ್ದು, ಇರುವಾಗ ಬುಧವಾರ ಗ್ರಾಮಕ್ಕೆ ತೆರಳಿ ದೇವಸ್ಥಾನದ ಪೂಜಾರಿಗೆ ಹಾಗೂ ಇತರ ಜನರಿಗೆ ಜಾತ್ರೆ ನಡೆಸದಂತೆ ಸೂಚಿಸಲಾಗಿತ್ತು. ಅದರಂತೆ ಗ್ರಾಮಸ್ಥರು ಒಪ್ಪಿಕೊಂಡಿದ್ದರು. ಆದರೆ, ರಾತ್ರಿ ಏಳು ಗಂಟೆಯ ಸುಮಾರಿಗೆ ಸಾಂಕ್ರಾಮಿಕ ರೋಗ ಹರಡುತ್ತಿರುವ ಬಗ್ಗೆ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ ಜಾತ್ರೆ ನಡೆಸಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಕಾಡಂಗೇರಾ ಗ್ರಾಮದ ಲೇಖಾಪಾಲಕ ಶಂಕರಗೌಡ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ವಡಗೇರಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಕ್ರಮಕ್ಕೆ ಮನವಿ

ADVERTISEMENT

ಜಾತ್ರೆ ನಡೆಯುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಇದೆ. ಅಲ್ಲದೆ ಗ್ರಾಮದಲ್ಲಿ ಅಂದು ಬಂದೋಬಸ್ತ್ ಮಾಡಿ, ಪೊಲೀಸರನ್ನು ನಿಯೋಜಿಸಲಾಗಿತ್ತು. ಇದಕ್ಕೆ ನೇರ ಹೊಣೆ ವಡಗೇರಾ ಠಾಣೆಯ ಪಿಎಸ್ಐ ಆಗಿದ್ದಾರೆ. ಜಾತ್ರೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೆ ನಾವೆಲ್ಲಿ ಜಾತ್ರೆ ಆಚರಿಸುತ್ತಿದ್ದೇವು. ನಮ್ಮ ಜತೆಗೆ ಅಂದು ಕರ್ತವ್ಯ ನಿರ್ವಹಿಸಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.