ADVERTISEMENT

ಅಂಗವಿಕಲರ ಅನುದಾನ ಬಳಕೆಗೆ ಮೀನಾಮೇಷ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 6:28 IST
Last Updated 18 ಡಿಸೆಂಬರ್ 2013, 6:28 IST

ಮಂಗಳೂರು: ಅಂಗವಿಕಲರ ಅಭಿವೃದ್ಧಿಗೆ ಶೇ 3 ನಿಧಿಯ ಅನುದಾನ ಬಳಕೆಯಲ್ಲಿ ನಿರೀಕ್ಷಿತ ಪ್ರಗತಿ ಆಗದ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಕೊರಗಪ್ಪ ನಾಯ್ಕ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿದರು.

‘ಅಂಗವಿಕಲ ವ್ಯಕ್ತಿಗಳಿಗೆ ಬೇಕಾದ ರೀತಿ ಸವ­ಲತ್ತು ನೀಡುವುದಕ್ಕೆ ಅವಕಾಶವಿದೆ. ಆದರೆ ಅಧಿ­ಕಾರಿಗಳ ಅಸಡ್ಡೆಯಿಂದಾಗಿ ಅಂಗವಿಕಲರು ಸವ­ಲತ್ತಿನಿಂದ ವಂಚಿತರಾಗಬೇಕಾಗಿದೆ’ ಎಂದರು.

‘ಉದ್ಯೋಗ ಖಾತರಿ ಯೋಜನೆಯಲ್ಲಿ ಕಿಂಡಿ ಅಣೆಕಟ್ಟು ನಿರ್ವಹಣೆಗೆ ಕ್ರಿಯಾಯೋಜನೆ ರೂಪಿಸಲು ಅವಕಾಶವಿದೆ. ಆದರೆ, ಅಧಿಕಾರಿ­ಗಳು ಮುತುವರ್ಜಿ ವಹಿಸಿಲ್ಲ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಜಲಾನಯನ ಅಭಿ­ವೃದ್ಧಿ ಯೋಜನೆಯಡಿ ಬಳಕೆಯಾಗದೆ ಉಳಿದಿ­ರುವ ₨ 1.25 ಕೋಟಿಯನ್ನು ಈ ಉದ್ದೇಶಕ್ಕೆ ಬಳಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಉಪಕಾರ್ಯದರ್ಶಿ ಎನ್‌.ಆರ್‌.­ಉಮೇಶ್‌ ಸೂಚಿಸಿದರು.

2 ವರ್ಷದಿಂದ ಬಳಕೆಯಾಗದ ರಸ್ತೆ: ‘ಬೆಳ್ತಂಗಡಿ ತಾಲ್ಲೂಕಿನ ಚಿಬಿದ್ರಿ– ತೋಟತ್ತಡಿ ರಸ್ತೆಗೆ ಡಾಂಬರೀಕರಣವಾಗಿ ಎರಡು ವರ್ಷ­ವಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ರಸ್ತೆ ಸಾರ್ವಜನಿಕ ಬಳಕೆಗೆ ಲಭ್ಯ­ವಾಗಿಲ್ಲ. ಇದ್ದ ಸೇತುವೆಯನ್ನು ಕೆಡವಿದ್ದಾದರೂ ಏಕೆ?’ ಎಂದು ಅಧ್ಯಕ್ಷರು ಪ್ರಶ್ನಿಸಿದರು.

‘ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆ ಅಡಿ ₨ 10 ಲಕ್ಷ ಮೊತ್ತಕ್ಕೆ ಸೇತುವೆಗೆ ಅಂದಾಜು­ಪಟ್ಟಿ ರೂಪಿಸಿದ್ದೆವು. ಬಳಿಕ ₨ 5 ಲಕ್ಷ ಮಾತ್ರ ಮಂಜೂರಾಗಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿ­­­­ದೆ’ ಎಂದು ಲೋಕೋಪಯೋಗಿ ಇಲಾಖೆ ಅಧಿ­ಕಾರಿ ವಿವರಣೆ ನೀಡಿದರು. ‘ಕಾಮಗಾರಿ ಮುಗಿಸಿದರೆ ಅನುದಾನ ಬಿಡುಗಡೆಯಾಗುತ್ತದೆ. ಈ ಸೇತುವೆಯನ್ನು ತಕ್ಷಣ ಪೂರ್ಣಗೊಳಿಸಬೇಕು’ ಎಂದು ಉಪಕಾರ್ಯದರ್ಶಿ ಹೇಳಿದರು.

ಅನ್ಯ ಸೇವೆಗೆ ನಿಯೋಜನೆ ಗೊಂಡಿರುವ ಜಿಲ್ಲೆಯ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಅಡುಗೆ ಸಹಾಯಕರನ್ನು ಸ್ವಸ್ಥಾನಕ್ಕೆ ಕರೆಸುವಂತೆ ಆದೇಶಿ­ಸಿದರೂ, ಅಧಿಕಾರಿಗಳು ಕಿಮ್ಮತ್ತು ನೀಡದ ಬಗ್ಗೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು.
‘ಕೆಲವು ಸಿಬ್ಬಂದಿಯನ್ನು ಮಾತ್ರ ಮೂಲ ಹುದ್ದೆಗೆ ಕಳುಹಿಸಿಕೊಡಲಾಗಿದೆ. ಇನ್ನುಳಿದ 12 ಮಂದಿ ಇನ್ನೂ ಮೂಲ ಹುದ್ದೆಗೆ ಮರಳಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದರು.

ಬೆಳ್ತಂಗಡಿ ಮಾದರಿ ವಸತಿ ಶಾಲೆಯ ನಿರ್ವ­ಹಣೆಗೆ ₨ 4.30 ಲಕ್ಷ, ಮೂಲಸೌಕರ್ಯ ಕಲ್ಪಿ­ಸಲು ₨ 9.10 ಲಕ್ಷ ಅನುದಾನ ಬಿಡುಗಡೆ­ಯಾ­ಗಿದೆ. ಬಟ್ಟೆ ಒಗೆಯುವ ಕಲ್ಲುಗಳನ್ನು ಅಳವ­ಡಿಸಿದ್ದು ಹೊರತಾಗಿ ಬೇರೆ ಮೂಲ­ಸೌಕರ್ಯ ಕಲ್ಪಿಸಿಲ್ಲ. ಅದರ ಮೇಲೆ ಈಗ ಮತ್ತೆ ₨ 18 ಲಕ್ಷ ಹಣ ಬಿಡುಗಡೆಯಾಗಿದೆ. ವಸತಿ ಶಾಲೆಯಲ್ಲಿ 20 ಸೈಕಲ್‌ಗಳನ್ನು ತಂದಿಡ­ಲಾಗಿದೆ. ಮುಗುಳಿ, ಬದನಾಜೆ, ನಾವೂರು, ಚಾರ್ಮಾಡಿ ಹಾಗೂ ಕರ್ನಾಡು ಶಾಲೆಗಳಿಂದ ಅಕ್ಷರದಾಸೋಹದ ಅಕ್ಕಿಯನ್ನು ಇಲ್ಲಿಗೆ ಪೂರೈಸಲಾಗಿದೆ. ಇಲ್ಲಿ ಇತ್ತೀಚೆಗೆ ಮಕ್ಕಳ ಹಾಸಿಗೆ ಸುಟ್ಟು ಹೋಗಿ ₨ 26 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದ್ದರೂ, ಪೊಲೀಸರಿಗೆ ದೂರು ನೀಡಿಲ್ಲ. ಈ ಶಾಲೆಯ ನಿರ್ವಹಣೆ ಬಗ್ಗೆ ಅನೇಕ ದೂರು ಕೇಳಿ ಬಂದಿದೆ’ ಎಂದು ಕೆ.ಕೊರಗಪ್ಪ ನಾಯಕ ಅವರು ಸಭೆಯ ಗಮನ ಸೆಳೆದರು. ಸ್ಥಳ ಪರಿಶೀಲಿಸಿ ವರದಿ ನೀಡುವುದಾಗಿ ಡಿಡಿಪಿಐ ತಿಳಿಸಿದರು.

ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳಿಗೆ ರೈತರ ಸಾಲ ಮನ್ನಾದ ₨ 169.71 ಕೋಟಿ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿ­ಯೊಬ್ಬರು ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.