ಮಂಗಳೂರು: ಆತನಿನ್ನೂ ಹಾಲುಗಲ್ಲದ ಬಾಲಕ. 7ನೇ ತರಗತಿ ವಿದ್ಯಾರ್ಥಿ ಯಶ್ ಪವಾರ್, `ಗಲ್ಫ್ ಡರ್ಟ್ ಟ್ರ್ಯಾಕ್ ರಾಷ್ಟ್ರೀಯ ಚಾಂಪಿಯನ್‌ಷಿಪ್~ನಲ್ಲಿ ಭಾಗವಹಿಸುತ್ತಿರುವ ಅತಿ ಕಿರಿಯ ಸ್ಪರ್ಧಿ! ನಾಸಿಕ್‌ನ ಈ ಬಾಲಕ ಇಷ್ಟು ಸಣ್ಣ ವಯಸ್ಸಿನಲ್ಲೇ ಕೆಲವು ರ‌್ಯಾಲಿಗಳಲ್ಲಿ ಭಾಗವಹಿಸಿದ ಅನುಭವಿ.
ಮಂಗಳೂರು ಎಕ್ಕೂರಿನ ಮೀನುಗಾರಿಕಾ ಕಾಲೇಜು ಮೈದಾನದಲ್ಲಿ ಭಾನುವಾರ ನಡೆಯಲಿರುವ ಗಲ್ಫ್ ಡರ್ಟ್ ಟ್ರ್ಯಾಕ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ಸ್ಪರ್ಧೆಗೆ ಅಭ್ಯಾಸ, ಪರಿಶೀಲನೆ (ಸ್ಕೃಟಿನಿ) ಪ್ರಕ್ರಿಯೆಗೆ ಶನಿವಾರ ಬಂದಿದ್ದ ಈತ ಎಲ್ಲರ ಗಮನ ಸೆಳೆದ.
ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಠ 18 ವರ್ಷ ಆಗಬೇಕು. ಆದರೆ ಎಫ್‌ಎಂಎಸ್‌ಸಿಐ (ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯ) 12 ವರ್ಷದ ಯಶ್‌ಗೆ ಡರ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲಿ ಭಾಗವಹಿಸಲು ಲೈಸೆನ್ಸ್ ನೀಡಿ ಒಂದು ವರ್ಷವೇ ಕಳೆದಿದೆ. ಖಾಸಗಿ ಜಾಗದಲ್ಲಿ ಎಫ್‌ಎಂಎಸ್‌ಸಿಐ ಆಯೋಜಿಸುವ ಸ್ಪರ್ಧೆಗಳಲ್ಲಿ (ಸೂಪರ್‌ಕ್ರಾಸ್, ಮೋಟೊಕ್ರಾಸ್, ಡರ್ಟ್‌ಟ್ರ್ಯಾಕ್) ಈತ ಭಾಗವಹಿಸಲು ಅವಕಾಶವಿದೆ.
ಖಾಸಗಿ ವಿದೇಶಿ ಮೋಟರ್‌ಸೈಕಲ್ (ಪ್ರೈವೇಟ್ ಫಾರಿನ್ ಮೋಟರ್‌ಸೈಕಲ್ಸ್) ಮುಕ್ತ ವಿಭಾಗ ಸೇರಿದಂತೆ 3 ವಿಭಾಗಗಳಲ್ಲಿ ಈತ ಸ್ಪರ್ಧಿಸುತ್ತಿದ್ದಾನೆ. ಈತ ಇಲ್ಲಿ ಸವಾರಿ ಮಾಡುವ ವಾಹನ ಹೊಂಡಾ ಸಿಆರ್-85. ಇದರ ಬೆಲೆ ಕಸ್ಟಮ್ಸ ಸುಂಕ ಸೇರಿ ರೂ. 3 ಲಕ್ಷ!
ಗಲ್ಫ್ ಡರ್ಟ್ ಟ್ರ್ಯಾಕ್ ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜಿಸುವ ಎಫ್‌ಎಂಎಸ್‌ಸಿಐ, ಕಳೆದ ವರ್ಷ ನಡೆಸಿದ `ವಿಶೇಷ ರೈಡಿಂಗ್ ಪರೀಕ್ಷೆಯಲ್ಲಿ~ ಈತ ತೇರ್ಗಡೆಯಾಗಿದ್ದ ಎಂದು ತಂದೆ ಮೋಹನ್ ಪವಾರ್ `ಪ್ರಜಾವಾಣಿ~ಗೆ ಶನಿವಾರ ತಿಳಿಸಿದರು.
ಗೋ ಕಾರ್ಟಿಂಗ್ (ಮಿನಿ ವಾಹನ) ಸ್ಪರ್ಧೆಯಲ್ಲಿ 8 ವರ್ಷ ನಂತರದಿಂದ ಭಾಗವಹಿಸಲು ಅವಕಾಶವಿದೆ.
ಕಳೆದ ವರ್ಷ ಗಲ್ಫ್ ಡರ್ಟ್ ಟ್ರ್ಯಾಕ್ ಚಾಂಪಿಯನ್‌ಷಿಪ್‌ನಲ್ಲಿ ಈತ ತನ್ನ ವಿಭಾಗದಲ್ಲಿ 10ನೇ ಸ್ಥಾನ ಗಳಿಸಿದ್ದು ಕಡಿಮೆ ಸಾಧನೆಯೇನೂ ಅಲ್ಲ. ಮುಂಬೈನಲ್ಲಿ ಕಳೆದ ವರ್ಷ ನಡೆದ ಅಶೋಕಾ ಡರ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲಿ ಈತ ನಾಲ್ಕನೇ ಸ್ಥಾನ ಗಳಿಸಿದ್ದು ಉತ್ತಮ ಸಾಧನೆ.
`ಯಶ್, ಡರ್ಟ್ ಟ್ರ್ಯಾಕ್ ರೇಸ್‌ನಲ್ಲಿ ಪ್ರಸ್ತುತ ದೇಶದ ಅತಿ ಕಿರಿಯ ಸ್ಪರ್ಧಿ~ ಎನ್ನುವ ಹೆಮ್ಮೆ ಮೋಹನ್ ಅವರದ್ದು. `ಇದು ತುಂಬಾ ದುಬಾರಿ ಕ್ರೀಡೆ. ಆದರೆ ಯಶ್ ನನಗೊಬ್ಬನೇ ಮಗ. ಸಾಧನೆ ಮಾಡುವುದಿದ್ದರೆ ಮಾಡಲಿ ಎನ್ನುವುದು ನನ್ನ ಆಸೆ. ಇನ್ನು ಎಲ್ಲ ಕ್ರೀಡೆಗಳಲ್ಲಿ ರಿಸ್ಕ್ ಎನ್ನುವುದು ಇದ್ದೇ ಇದೆ~ ಎನ್ನುತ್ತಾರೆ.
ಆಸಕ್ತಿ: `ನಾನೂ ರ‌್ಯಾಲಿಗಳಿಗೆ ಹೋಗುತ್ತಿದ್ದೆ. ಅಭ್ಯಾಸ ನಂತರ ನನ್ನ ಬೈಕ್ ಪಡೆದು ಓಡಿಸತೊಡಗಿದ. ಮೊದಲು ಆತ ಕಲಿತದ್ದು 110 ಸಿ.ಸಿ ಹೊಂಡಾ ಬೈಕ್. ನಂತರ ನಾನು ಓಡಿಸುತ್ತಿದ್ದ ಟಿವಿಎಸ್ ಅಪಾಚೆ -180 ಕಲಿತ. ನಂತರ ಖುದ್ದು ಆಸಕ್ತಿಯಿಂದ ಓಡಿಸತೊಡಗಿದ. ಈಗ ಪ್ರತಿ ಶನಿವಾರ, ಭಾನುವಾರ 3 ಗಂಟೆ ತಪ್ಪದೇ ಅಭ್ಯಾಸ ನಡೆಸುತ್ತಾನೆ~ ಎನ್ನುತ್ತಾರೆ ಮೋಹನ್.
ಮೊದಲ ರೇಸ್‌ನಲ್ಲೇ ನನ್ನನ್ನೂ ಹಿಂದೆ ಹಾಕಿದ್ದ ಎಂದು ಮಗನ ಸಾಹಸ ನೆನಪಿಸಿಕೊಂಡು ಅವರು ಮುಗುಳ್ನಕ್ಕರು. ಮೋಹನ್ ಅವರ ಸೋದರ ಸಂಭಾಜಿ ಪವಾರ್ ಕೂಡ ಇಲ್ಲಿ ಭಾಗವಹಿಸುತ್ತಿದ್ದಾರೆ. ಈ ಕುಟುಂಬದಲ್ಲಿ ಮೊದಲು ಸ್ಪರ್ಧಿಸಿದವರೇ ಸಂಭಾಜಿ.ಖ್ಯಾತ ರ‌್ಯಾಲಿ ಸವಾರ ಗಣೇಶ್ ಲೊಖಾಂಡೆ, ಶಮೀಮ್ ಖಾನ್ ಮತ್ತು ಸೂರಜ್ ಕುಟೆ ಈತನಿಗೆ ತರಬೇತಿ ನೀಡುತ್ತಿದ್ದಾರೆ.
`8 ವರ್ಷದವನಿದ್ದಾಗ ಬೈಕ್ ಕಲಿತೆ. ನನಗೆ ಮೊದಲ ಬಾರಿ ರ‌್ಯಾಲಿಯಲ್ಲಿ ಭಾಗವಹಿಸಿದಾಗ ಹೆದರಿಕೆಯಿರಲಿಲ್ಲ. ಆದರೆ ರೋಮಾಂಚನವಾಯಿತು. ಈಗ ಅಭ್ಯಾಸವಾಗಿದೆ~ ಎನ್ನುತ್ತಾನೆ ನಾಸಿಕ್‌ನ ಸೇಂಟ್ ಜೇವಿಯರ್ ಶಾಲೆಯ ಯಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.